ಈದುಲ್‌ ಫಿತ್ರ್ ಅಂಗವಾಗಿ ಮಸೀದಿಗೆ ಧ್ವನಿವರ್ಧಕ ಕೊಡುಗೆ ನೀಡಿದ ಗ್ರಾಮದ ಹಿಂದೂ ಕುಟುಂಬಗಳು

Update: 2022-05-06 10:40 GMT

ನಾಗ್ಪುರ್: ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯ ಕೇಲ್ವಾಡ್ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ವಾಸವಾಗಿಲ್ಲ. ಆದರೆ ಈ ಗ್ರಾಮದಲ್ಲಿ ವಾಸಿಸುವ ಎಲ್ಲಾ ಹಿಂದು ಕುಟುಂಬಗಳೂ  ಜತೆಯಾಗಿ ನೆರೆಯ ಕಿನ್ಹೋಲ ಗ್ರಾಮದ ಮಸೀದಿಗೆ ಈದ್ ಸಂದರ್ಭ ಧ್ವನಿವರ್ಧಕವೊಂದನ್ನು ಕೊಡುಗೆಯಾಗಿ ನೀಡುವ ಮೂಲಕ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ಕುರಿತು ವಿವಾದ ಸೃಷ್ಟಿಸುತ್ತಿರುವವರಿಗೆ ಸ್ಪಷ್ಟ ಸಂದೇಶ ರವಾನಿಸಿವೆ.

ಮಂಗಳವಾರ ಕೇಲ್ವಾಡ್ ಗ್ರಾಮದ ನಿವಾಸಿಗಳು ಕಿನ್ಹೋಲ ಗ್ರಾಮದ ಮುಸ್ಲಿಂ ಬಾಂಧವರನ್ನು ಆಹ್ವಾನಿಸಿ ನಂತರ ಅಲ್ಲಿನ ಮಸೀದಿಯ ಧರ್ಮಗುರುಗಳಿಗೆ ಸೌಹಾರ್ದತೆಯ ಸಂಕೇತವಾಗಿ ಧ್ವನಿವರ್ಧಕವನ್ನು ಹಸ್ತಾಂತರಿಸಿದರು.

"ಈ ಎರಡೂ ಗ್ರಾಮಗಳ ಹಿಂದುಗಳು ಮತ್ತು ಮುಸ್ಲಿಮರು ಶತಮಾನಗಳಿಂದ ಸೌಹಾರ್ದತೆಯಿಂದ ವಾಸಿಸುತ್ತಿದ್ದಾರೆ. ಪರಸ್ಪರರ ಬಗ್ಗೆ ಯಾವುದೇ ಸಮಸ್ಯೆಯಿಲ್ಲ. ರಾಜಕಾರಣಿಗಳು ಮತಗಳ ಧ್ರುವೀಕರಣಕ್ಕಾಗಿ ಜನರನ್ನು ದೂರಗೊಳಿಸುತ್ತಿದ್ದಾರೆ" ಎಂದು ಗ್ರಾಮದ ನಾಗರಿಕರೊಬ್ಬರು ದೂರಿದ್ದಾರೆ.

"ಈ ರೀತಿ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿರುವುದು ಒಂದು ಸಾಂಕೇತಿಕ ಪ್ರತಿಭಟನೆಯಾಗಿದೆ. ಧ್ವನಿವರ್ಧಕಗಳ ವಿಚಾರವನ್ನೆತ್ತಿ ಧಾರ್ಮಿಕ ಸೌಹಾರ್ದತೆಯಿಂದ ಬಾಳುತ್ತಿರುವವರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವ ಯತ್ನದ ವಿರುದ್ಧ ಇದು ಪ್ರತಿಭಟನೆಯಾಗಿದೆ" ಎಂದು ಶಾಂತಿ ಸಮಿತಿ ಅಧ್ಯಕ್ಷ ಉಮೇಶ್ ಪಾಟೀಲ್ ಹೇಳಿದ್ದಾರೆ.

ತಮ್ಮ ಮಸೀದಿಯಲ್ಲಿ ಈಗಾಗಲೇ ಒಂದು ಧ್ವನಿವರ್ಧಕವಿದ್ದರೂ ಕೇಲ್ವಾಡ್ ಗ್ರಾಮದ ಜನರ ಪ್ರೀತಿಯ ಉಡುಗೊರೆಯನ್ನು ಖುಷಿಯಿಂದ ಸ್ವೀಕರಿಸಿದ್ದಾಗಿ ಕಿನ್ಹೋಲ ಮಸೀದಿಯ ಮೌಲಾನ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News