ಮುಸ್ಲಿಮರನ್ನು, ನರ್ಸ್‌ ಗಳನ್ನು ಅವಹೇಳನ ಮಾಡಿದ ಆರೋಪ: ಅನಿವಾಸಿ ಭಾರತೀಯನನ್ನು ಉದ್ಯೋಗದಿಂದ ವಜಾಗೊಳಿಸಿದ ಕತರ್ ಸಂಸ್ಥೆ

Update: 2022-05-06 12:45 GMT
Photo: Facebook

ತಿರುವನಂತಪುರಂ: ಮುಸ್ಲಿಂ ಸಮುದಾಯವನ್ನು ಗುರಿಪಡಿಸಿ, ಅರಬ್ ರಾಷ್ಟ್ರಗಳಿಗೆ ನರ್ಸ್‍ಗಳನ್ನು ಅಲ್ಲಿನ ಉಗ್ರರಿಗೆ ಲೈಂಗಿಕ ಗುಲಾಮರಾಗಲು ನೇಮಕಗೊಳಿಸಲಾಗುತ್ತಿದೆ ಎಂದು  ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರೋಪಿಸಿದ್ದ ಶಿಶುಪಾಲನ್ ದುರ್ಗಾದಾಸ್ ಎಂಬಾತನನ್ನು ಕೇರಳ ಸರಕಾರದ ಸಂಸ್ಕೃತಿ ಸಚಿವಾಲಯದ ಅಧೀನದ ಮಲಯಾಳಂ ಮಿಷನ್‍ನ ಕತಾರ್ ಘಟಕದ ಪ್ರಾದೇಶಿಕ ಸಂಘಟಕ ಹುದ್ದೆಯಿಂದ ಕಿತ್ತೊಗೆಯಲಾಗಿದ್ದರೆ ಇದೀಗ ಆತ ಹಿರಿಯ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ನಾರಂಗ್ ಪ್ರಾಜೆಕ್ಟ್ಸ್ ಕತಾರ್ ಕೂಡ ಆತನನ್ನು ಉದ್ಯೋಗದಿಂದ ವಜಾಗೊಳಿಸಿರುವುದನ್ನು ಕಂಪೆನಿಯ ಪ್ರಾದೇಶಿಕ ನಿರ್ದೇಶಕ ಟಿಮ್ ಮಾರ್ಫಿ ಘೊಷಿಸಿದ್ದಾರೆ. ದುರ್ಗಾದಾಸ್ ವಿರುದ್ಧ ತಮಗೆ ಬಂದ ಹಲವು ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು mediaone ವರದಿ ಮಾಡಿದೆ.

ಆತನ ಹೇಳಿಕೆ ಖಂಡಿಸಿ ಕತಾರ್ ನರ್ಸಿಂಗ್ ಸಂಘಟನೆ ಯುನೀಖ್, ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿತ್ತಲ್ಲದೆ ಕೇರಳ ಮುಖ್ಯಮಂತ್ರಿ ಮತ್ತು ಡಿಜಿಪಿಗೂ ದೂರು ನೀಡಿತ್ತು.

ತಿರುವನಂತಪುರಂನಲ್ಲಿ ನಡೆದ 1ನೇ ಅನಂತಪುರಿ ಹಿಂದು ಮಹಾ ಸಮ್ಮೇಳನ್‍ನಲ್ಲಿ ಶಿಶುಪಾಲನ್ ಪ್ರಚೋದನಾತ್ಮಕ ಭಾಷಣ ಮಾಡಿದ್ದಾನೆಂದು ಆರೋಪಿಸಲಾಗಿದೆ. ಈ ಸಮಾರಂಭದ ಉದ್ಘಾಟನೆಯನ್ನು ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ನೆರವೇರಿಸಿದ್ದರು.

ಈ ಕಾರ್ಯಕ್ರಮದ ನಾಲ್ಕನೇ ದಿನದಂದು ದುರ್ಗಾದಾಸ್ "ಗಲ್ಫ್ ರಾಷ್ಟ್ರಗಳಲ್ಲಿ ನೀಡಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೊಡುಗೆಗಳಿಗಾಗಿ" ಪ್ರಶಸ್ತಿಯನ್ನು ಕೇಂದ್ರ ವಿದೇಶಾಂಗ ವ್ಯವಗಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಅವರಿಂದ ಪಡೆದಿದ್ದ. ಆತ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹಿತ ಹಲವು ಬಿಜೆಪಿ ನಾಯಕರ ಜತೆಗಿರುವ ಫೋಟೋಗಳನ್ನು ತನ್ನ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾನೆ.

ತಿರುವನಂತಪುರಂನಲ್ಲಿ ಹಿಂದು ಧರ್ಮ ಪರಿಷದ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಲವು ಭಾಷಣಕಾರರು ಮುಸ್ಲಿಂ ವ್ಯಾಪಾರ ಸಂಸ್ಥೆಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರು. ಮಾಜಿ ಶಾಸಕ ಪಿ ಸಿ ಜಾರ್ಜ್ ಕೂಡ ಈ ಸಭೆಯಲ್ಲಿ ಭಾಗವಹಿಸಿ ಮುಸ್ಲಿಂ ವ್ಯಾಪಾರಿಗಳ ವಿರುದ್ಧ ನಿಂದನಾತ್ಮಕ ಆರೋಪಗಳನ್ನು ಮಾಡಿದ್ದಕ್ಕಾಗಿ ಬಂಧನಕ್ಕೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News