×
Ad

ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ವಿಚಾರ; ರಾಜ್ಯ ನಾಯಕರಿಂದ ಶೀಘ್ರವೇ ಅಂತಿಮ ನಿರ್ಧಾರ: ಕುಯಿಲಾಡಿ ಸುರೇಶ್

Update: 2022-05-06 18:31 IST
ಪ್ರಮೋದ್ ಮಧ್ವರಾಜ್

ಉಡುಪಿ : ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸುವ ಕುರಿತಂತೆ ಜಿಲ್ಲಾ ಸಂಘದ ಅಭಿಪ್ರಾಯವನ್ನು ರಾಜ್ಯ ನಾಯಕರು ಕೇಳಿದ್ದು, ಕಾರ್ಯಕರ್ತ ರೊಂದಿಗೆ ಸಮಾಲೋಚಿಸಿ ನಾವು ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ. ಅಂತಿಮ ನಿರ್ಧಾರವನ್ನು ರಾಜ್ಯ ನಾಯಕರು ತೆಗೆದುಕೊಳ್ಳುವರು ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಹೊಟೇಲ್ ಕಿದಿಯೂರಿನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯ ವೇಳೆ ಸುಧೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿರುವ ಪ್ರಮೋದ್ ಮಧ್ವರಾಜ್ ಪಕ್ಷಕ್ಕೆ ಸೇರ್ಪಡೆ ವಿಷಯದ ಕುರಿತು ಪ್ರಶ್ನಿಸಿದಾಗ ಉತ್ತರಿಸಿದ ಸುರೇಶ್ ನಾಯಕ್, ಜಿಲ್ಲಾ ಕಾರ್ಯಕರ್ತರ ಹಾಗೂ ನಾಯಕರ ಅಭಿಪ್ರಾಯಗಳನ್ನು ನಾವು ತಿಳಿಸಿದ್ದೇವೆ ಎಂದರು.

ಇನ್ನು ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಬೇಕೇ ಅಥವಾ ಬೇಡವೇ ಎಂಬುದನ್ನು ರಾಜ್ಯ ನಾಯಕರು ನಿರ್ಧರಿಸು ವರು. ರಾಜ್ಯ ನಾಯಕರು ತೆಗೆದು ಕೊಳ್ಳುವ ಯಾವುದೇ ನಿರ್ಧಾರಕ್ಕೂ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ ಎಂದು ಸುರೇಶ್ ನಾಯಕ್ ತಿಳಿಸಿದರು.

ಕಾರ್ಕಳದ ಪ್ರಮುಖ ಕಾಂಗ್ರೆಸ್ ನಾಯಕ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು ಪಕ್ಷಕ್ಕೆ ಸೇರ್ಪಡೆ ಗೊಳ್ಳುವ ಸಾಧ್ಯತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದವರು ನುಡಿದರು.

ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿಬರುವ ಯಾರನ್ನೇ ಆದರೂ ಬಿಜೆಪಿ ಸ್ವಾಗತಿಸುತ್ತದೆ. ಅದು ಪ್ರಮೋದ್ ಮಧ್ವರಾಜ್ ಇರಬಹುದು ಅಥವಾ ಇನ್ಯಾರೇ ಆಗಿರಬಹುದು. ಪ್ರಮೋದ್ ಸೇರ್ಪಡೆಯಿಂದ ಪಕ್ಷಕ್ಕೆ ಆನೆಬಲ ಬರುವುದೇ ಎಂದು ಪ್ರಶ್ನಿಸಿದಾಗ, ಪಕ್ಷಕ್ಕೆ ಕಾರ್ಯಕರ್ತರೇ ನಿಜವಾದ ಆನೆಬಲ. ಯಾವುದೇ ನಾಯಕರು ಆನೆಬಲ ಅಲ್ಲ. ಪಕ್ಷದ ಸಿದ್ಧಾಂತ ಒಪ್ಪಿಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದರು.

ಕಾಂಗ್ರೆಸ್‌ನಿಂದ ಬಂದವರನ್ನೆಲ್ಲಾ ಪಕ್ಷಕ್ಕೆ ಸೇರಿಸಿಕೊಂಡರೆ ಬಿಜೆಪಿ, ಕಾಂಗ್ರೆಸ್‌ನಂತಾಗದೇ ಎಂದು ಕುಯಿಲಾಡಿ ಅವರನ್ನು ಪ್ರಶ್ನಿಸಿದಾಗ, ಬಿಜೆಪಿ ಎಂದೂ ಕಾಂಗ್ರೆಸ್ ಆಗಲು ಸಾಧ್ಯವಿಲ್ಲ. ಬಿಜೆಪಿ ಗಟ್ಟಿಯಾದ ಸಿದ್ದಾಂತವನ್ನು ಹೊಂದಿದೆ. ಈ ಸಿದ್ಧಾಂತದ ಚೌಕಟ್ಟನ್ನು ಮೀರಿ ಯಾವ ನಾಯಕರೂ ಬೆಳೆಯಲು ಸಾಧ್ಯವಿಲ್ಲ. ನಮ್ಮ ಪಕ್ಷ ಎಂದೂ ವ್ಯಕ್ತಿ, ಕುಟುಂಬ ಆಧಾರಿತ ಪಕ್ಷವಾಗಲು ಸಾಧ್ಯವಿಲ್ಲ ಎಂದರು.

ಪ್ರಮೋದ್ ಅವರ ಪಕ್ಷ ಸೇರ್ಪಡೆಗೆ ಜಿಲ್ಲಾ ಬಿಜೆಪಿ ಹಸಿರು ನಿಶಾನೆ ತೋರಿರುವುದರಿಂದ, ರಾಜ್ಯ ಮಟ್ಟದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಪ್ರಮೋದ್ ಮಧ್ವರಾಜ್‌ಗೆ ಹಾದಿ ಸುಗಮಗೊಂಡಂತಾಗಿದೆ. ಈ ಮೂಲಕ ಕಳೆದ ಕನಿಷ್ಠ ಎಂಟು ವರ್ಷಗಳಿಂದ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ಕುರಿತು ಕೇಳಿಬರುತ್ತಿರುವ ಊಹಾಪೋಹಕ್ಕೆ ಶಾಶ್ವತ ತೆರೆ ಬೀಳಲಿದೆ. ರಾಜ್ಯ ಹಾಗೂ ರಾಷ್ಟ್ರ ನಾಯಕರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಅವರು ಪಕ್ಷಕ್ಕೆ ಸೇರ್ಪಡೆ ಗೊಳ್ಳುವ ಸಾಧ್ಯತೆ ಇದೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News