​ಹರ್ಯಾಣ ವಿಧಾನಸಭೆ ಪ್ರವೇಶಿಸಿದರೆ ಥಳಿಸುವುದಾಗಿ ಗೋರಕ್ಷಕರ ಬೆದರಿಕೆ: ಕಾಂಗ್ರೆಸ್ ಶಾಸಕನ ಆರೋಪ

Update: 2022-05-06 15:40 GMT

ಚಂಡಿಗಡ,ಮೇ 6: ತಾನು ರಾಜ್ಯ ವಿಧಾನಸಭೆಯನ್ನು ಪ್ರವೇಶಿಸಿದರೆ ತನ್ನನ್ನು ಥಳಿಸುವುದಾಗಿ ಗೋರಕ್ಷಕರು ಬೆದರಿಕೆಯೊಡ್ಡಿದ್ದಾರೆ ಎಂದು ಹರ್ಯಾಣದ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಆರೋಪಿಸಿದ್ದಾರೆ.ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಕೋರಿ ಖಾನ್ ಮುಖ್ಯಮಂತ್ರಿ ಎಂ.ಎಲ್.ಖಟ್ಟರ್,ಗೃಹಸಚಿವರು ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಪತ್ರಗಳನ್ನು ಬರೆದಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿರುವ ವೀಡಿಯೊದಲ್ಲಿ ಗೋರಕ್ಷಕರು ತನಗೆ ಬೆದರಿಕೆಯೊಡ್ಡಿದ್ದಾರೆ ಎಂದು ಹೇಳಿದ ನುಹ್ ಜಿಲ್ಲೆಯ ಫಿರೋಝ್ಪುರ ಝಿರ್ಕಾ ಕ್ಷೇತ್ರದ ಶಾಸಕ ಖಾನ್,ಪುಂಡ ಗೋರಕ್ಷಕರಿಗೆ ನುಹ್ ಜಿಲ್ಲೆಯಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಕ್ಕಾಗಿ ತನ್ನನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

‘ಈ ರಾಜ್ಯದಲ್ಲಿ ಮತಾಂಧರಿಂದ ಓರ್ವ ಶಾಸಕ ಸುರಕ್ಷಿತನಲ್ಲ ಎಂದಾದರೆ ಜನಸಾಮಾನ್ಯರು ಏನನ್ನು ನಿರೀಕ್ಷಿಸಬಹುದು? ಓರ್ವ ಜನಪ್ರತಿನಿಧಿಯಾಗಿ ನಾನು ಗೂಂಡಾಗಿರಿ ಹಾಗೂ ಬಲ ಮತ್ತು ಶಸ್ತ್ರಾಸ್ತ್ರಗಳ ಅನಧಿಕೃತ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದೆ. ಇದರಲ್ಲಿ ತಪ್ಪೇನಿದೆ ’ ಎಂದು ಪ್ರಶ್ನಿಸಿದ ಖಾನ್,ತನಗೆ ಅಥವಾ ತನ್ನ ಕುಟುಂಬಕ್ಕೆ ಏನಾದರೂ ಅಹಿತಕರವಾದುದು ಸಂಭವಿಸಿದರೆ ರಾಜ್ಯ ಸರಕಾರವೇ ಹೊಣೆಯಾಗುತ್ತದೆ ಎಂದರು.
‘ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಂತೆ ನಾವು ಜನರಿಗೆ ಸೂಚಿಸಿದ್ದೇವೆ. ಎರಡೂ ಸಮುದಾಯಗಳೊಂದಿಗೆ ನಾವು ಮಾತನಾಡಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾಗದಂತೆ ನಾವು ನೋಡಿಕೊಳ್ಳುತ್ತೇವೆ ’ ಎಂದು ನುಹ್ ಜಿಲ್ಲಾಧಿಕಾರಿ ಅಜಯ್ ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News