×
Ad

ಸ್ವಸಹಾಯ ಸಂಘಗಳ ಮಹಿಳಾ ಉದ್ಯಮಿಗಳಿಂದ ಬಜಾರ್ ಮೇಳ

Update: 2022-05-06 21:11 IST

ಮಣಿಪಾಲ : ಸ್ವಸಹಾಯ ಸಂಘಗಳ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಕೆನರಾ ಬ್ಯಾಂಕ್ ಮಣಿಪಾಲ ಸರ್ಕಲ್ ಮೂರು ದಿನಗಳ ಕೆನರಾ ಉತ್ಸವ ಸ್ವಸಹಾಯ ಸಂಘಗಳ ಬಜಾರ್ ಮೇಳವನ್ನು ಮಣಿಪಾಲದ ಸಿಂಡಿಕೇಟ್ ಗೋಲ್ಡನ್ ಜುಬಿಲಿ ಹಾಲ್ ಬಳಿ ಇಂದಿನಿಂದ ಆಯೋಜಿಸಿದೆ.

ಬಜಾರ್ ಮೇಳವನ್ನು ಮಣಿಪಾಲ ಕೆನರಾಬ್ಯಾಂಕ್ ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ರಾಮ ನಾಯ್ಕ್ ಉದ್ಘಾಟಿಸಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇಶಕಿ  ವೀಣಾ ವಿವೇಕಾನಂದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಮ ನಾಯ್ಕ್, ಎಲ್ಲಾ ಉದಯೋನ್ಮುಖ ಉದ್ಯಮಿಗಳಿಗೆ ಮಾರ್ಕೆಟಿಂಗ್ ಪ್ರಮುಖ ಭಾಗವಾಗಿದೆ. ಇದಕ್ಕಾಗಿ ಈ ಮೇಳದ ಮೂಲಕ ಕೆನರಾ ಬ್ಯಾಂಕ್ ಎಲ್ಲಾ ಮಹಿಳಾ ಉದ್ಯಮಿಗಳಿಗೆ ತಮ್ಮ ಕೈಯಿಂದ ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಒಳ್ಳೆಯ ಅವಕಾಶವನ್ನು ಒದಗಿಸುತ್ತಿದೆ ಎಂದರು.

ಕೆನರಾ ಬ್ಯಾಂಕ್ ವೃತ್ತದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ೧೦೦೦ ಸಿಬ್ಬಂದಿಗಳಿಗೆ ಮಹಿಳಾ ಉದ್ಯಮಿ ಗಳಿಂದ ಉತ್ಪನ್ನಗಳನ್ನು ಖರೀದಿಸಲು ಮತ್ತು ಇಂತಹ ಪ್ರದರ್ಶನಗಳ ಮೂಲಕ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ವಿನಂತಿಸಲಾಗಿದೆ ಎಂದು ರಾಮಾ ನಾಯ್ಕ್ ತಿಳಿಸಿದರು.

ಕೆನರಾ ಬ್ಯಾಂಕ್ ಸರ್ಕಲ್ ಕಛೇರಿಯ ಉಪ ಪ್ರಧಾನ ವ್ಯವಸ್ಥಾಪಕ ಪ್ರದೀಪ್ ಭಕ್ತ ಮಾತನಾಡಿ, ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸಿ ಸ್ಥಳೀಯ ಜನರಿಗೆ ಉತ್ತಮ ಉದ್ಯೋಗಾವಕಾಶವನ್ನು ಒದಗಿಸಿದ ಎಲ್ಲಾ ಮಹಿಳಾ ಉದ್ಯಮಿಗಳನ್ನು ಶ್ಲಾಘಿಸಿದರು.

ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಣಿಪಾಲದ ಉಪ ಪ್ರಧಾನ ವ್ಯವಸ್ಥಾಪಕಿ  ಪದ್ಮಾವತಿ, ಲೀಡ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಪಿ.ಎಂ. ಪಿಂಜಾರ, ಕೆನರಾ ಬ್ಯಾಂಕ್ ವಾಣಿಜ್ಯೋದ್ಯಮ ಅಭಿವೃದ್ಧಿ ಕೋಶದ ಮುಖ್ಯಸ್ಥೆ ಸುಮಾ ಗಾಂವ್ಕರ್ ಹಾಗೂ ಇತರ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು. 

ಸುಮಾರು ೩೬ ಮಹಿಳಾ ಎನ್‌ಆರ್‌ಎಲ್‌ಎಂ ಸಂಜೀವಿನಿ ಮತ್ತು ಸ್ತ್ರೀ ಶಕ್ತಿ ಗುಂಪುಗಳು ಭಾಗವಹಿಸಿ ತಮ್ಮ ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶಿಸಿದವು. ಕೆನರಾ ಬಜಾರ್ ಮೇಳ ಮೇ ೮ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶವಿರುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News