ಗುಜರಾತ್: ಭಕ್ತಿಗೀತೆಗೆ ಸ್ಪೀಕರ್ ಬಳಸಿದ್ದಕ್ಕಾಗಿ ಗುಂಪಿನಿಂದ ಥಳಿಸಿ ವ್ಯಕ್ತಿಯ ಹತ್ಯೆ

Update: 2022-05-06 18:31 GMT

ಅಹ್ಮದಾಬಾದ್, ಮೇ 6: ಮನೆಯೊಳಗೆ ನಿರ್ಮಿಸಲಾದ ದೇವಾಲಯದಲ್ಲಿ ಭಕ್ತಿಗೀತೆಗಳನ್ನು ನುಡಿಸಲು ಸ್ಪೀಕರ್ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ವಾಗ್ವಾದಕ್ಕಿಳಿದ ಆರು ಮಂದಿಯ ಗುಂಪೊಂದು 42 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಥಳಿಸಿ ಹತ್ಯೆಗೈದ ಘಟನೆ ಗುಜರಾತ್ನ ಮೆಹ್ಸಾನಾ ಜಿಲ್ಲೆಯಲ್ಲಿ ವರದಿಯಾಗಿದೆ.

ಮುದರ್ದಾ ಗ್ರಾಮದಲ್ಲಿ ಮೇ 3ರಂದು ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇನ್ನೋರ್ವ ತಲೆಮರೆಸಿಕೊಂಡಿದ್ದಾನೆಂದು ಲಂಗ್ನಾಝ್ ಪೊಲೀಸ್ ಠಾಣಾ ಸಬ್ಇನ್ಸ್ಪೆಕ್ಟರ್ ಎಸ್.ಬಿ.ಚಾವ್ಡಾ ತಿಳಿಸಿದ್ದಾರೆ.

ಠಾಕೂರ್ ಕುಟುಂಬಿಕರು ತಾವು ಮನೆಯೊಗೆ ನಿರ್ಮಿಸಿದ ಪುಟ್ಟ ದೇವಾಲಯದಲ್ಲಿ ಸ್ಪೀಕರ್ ಅಳವಡಿಸಿರುವ ಕುರಿತಾಗಿ, ಆರೋಪಿಗಳು ಜಸ್ವಂತ್ ಠಾಕೂರ್ ಹಾಗೂ ಆತನ ಸಹೋದರ ಅಜಿತ್ ಗೆ ದೊಣ್ಣೆಗಳಿಂದ ಥಳಿಸಿದ್ದಾರೆ.

ಠಾಕೂರ್ ಕುಟುಂಬಿಕರು ಮುದಾರ್ದ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಮೇಲ್ದಿ ದೇವಿಗೆ ಪುಟ್ಟ ದೇಗುಲವೊಂದನ್ನು ನಿರ್ಮಿಸಿದ್ದರು. ಮೇ 3ರ ಸಂಜೆ ಅಜಿತ್ ದೇವಾಲಯದಲ್ಲಿ ದೀಪಹಚ್ಚಿ, ಭಕ್ತಿಗೀತೆಗಳನ್ನು ಸ್ಪೀಕರ್ ನಲ್ಲಿ ನುಡಿಸಲು ಆರಂಭಿಸಿದ್ದ. 

ಸ್ಪೀಕರ್ ಬಳಕೆಯಿಂದ ರೊಚ್ಚಿಗೆದ್ದ ಸ್ಥಳೀಯ ಗ್ರಾಮಸ್ಥ ಸದಾಜಿ ಠಾಕೂರ್ ಎಂಬಾತ ಅಲ್ಲಿಗೆ ಧಾವಿಸಿ ಬಂದು ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಧ್ವನಿಯನ್ನು ತುಂಬಾ ಕಡಿಮೆ ಮಟ್ಟದಲ್ಲಿರಿಸಲು ಅಜಿತ್ ಅವರಿಗೆ ಮನವರಿಕೆ ಮಾಡಲು ಯತ್ನಿಸಿದ. ಆದರೆ ಅದನ್ನು ಒಪ್ಪದ ಸದಾಜಿ ಹಾಗೂ ಇತರ ಐವರು ಅಜಿತ್ ಜೊತೆ ವಾಗ್ವಾದಕ್ಕಿಳಿದರು. ಅವರು ಅಜಿತ್ ಠಾಕೂರ್ ಹಾಗೂ ಹಿರಿಯ ಸಹೋದರ ಜಸ್ವಂತ್ ಠಾಕೂರ್ರನ್ನು ಹಿಗ್ಗಾಮಗ್ಗಾ ಥಳಿಸಿದರು. ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಸಹೋದರರನ್ನು ಮೆಹ್ಸಾನಾ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಿದರು ಮತ್ತು ಅವರನ್ನು ಆ್ಯಂಬುಲೆನ್ಸ್ ನಲ್ಲಿ ಮೆಹ್ಸಾನಾ ನಗರ ಆಸ್ಪತ್ರೆಗೆ ದಾಖಲಿಸಿದರು ಎಂದು ಚಾವ್ಡಾ ತಿಳಿಸಿದರು.

ಘಟನೆಯಲ್ಲಿ ಠಾಕೂರ್ ಸಹೋದರರಿಗೆ ಗಂಭೀರವಾದ ಗಾಯಗಳಾಗಿದ್ದು, ಅವರನ್ನು ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಹ್ಮದಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜಸ್ವಂತ್ ಠಾಕೂರ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಅಜಿತ್ ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಕೈ ಮುರಿದಿದೆಯೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News