ಬಹುತೇಕ ಕಾನೂನುಬಾಹಿರ ಅಂಶ ಇದ್ದರಷ್ಟೇ ಟ್ವಿಟರ್ ಖಾತೆ ನಿಷೇಧ: ಕೇಂದ್ರದ ಸ್ಪಷ್ಟನೆ
ಹೊಸದಿಲ್ಲಿ: ಟ್ವಿಟರ್ ಖಾತೆಯಲ್ಲಿ ಟ್ವಿಟರ್ ಬಳಕೆದಾರ ಬಹುಪಾಲು ಕಾನೂನುಬಾಹಿರ ಅಂಶಗಳನ್ನು ಪೋಸ್ಟ್ ಮಾಡಿದ್ದರೆ ಮಾತ್ರ ಆತನ ಟ್ವಿಟರ್ ಖಾತೆಯನ್ನು ರದ್ದುಪಡಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‍ಗೆ ತಿಳಿಸಿದೆ.
ಮಹತ್ವದ ಸಮಾಜ ಮಾಧ್ಯಮ ಮಧ್ಯವರ್ತಿಗಳು (ಎಸ್‍ಎಸ್‍ಎಂಐ), ಉಲ್ಲಂಘನೆ ಎನ್ನಲಾದ ಅಂಶಗಳ ಬಗ್ಗೆ ಇಂಥ ಕ್ರಮವನ್ನು ಆರಂಭಿಸುವ ಮುನ್ನ ಬಳಕೆದಾರರಿಗೆ ಮಾಹಿತಿ ನೀಡುವುದು ಅಗತ್ಯ ಎಂದು ಸ್ಪಷ್ಟಪಡಿಸಿದೆ.
"ಒಬ್ಬ ಬಳಕೆದಾರನ ಬರಹ/ ಪೋಸ್ಟ್/ ಟ್ವೀಟ್‍ಗಳ ಪೈಕಿ ಬಹುಪಾಲು ಕಾನೂನು ಬಾಹಿರವಾಗಿದ್ದರೆ ಮಾತ್ರ ಸಾಮಾಜಿಕ ಜಾಲತಾಣ ಅವುಗಳನ್ನು ನಿರ್ಬಂಧಿಸುವ ಅಥವಾ ಇಡೀ ಖಾತೆಯನ್ನು ನಿಷೇಧಿಸುವ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ" ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಲ್ಲಿಸಿದ ಅಫಿಡವಿಟ್‍ನಲ್ಲಿ ಹೇಳಲಾಗಿದೆ.
ತಮ್ಮ ಟ್ವಿಟರ್ ಖಾತೆಯನ್ನು ರದ್ದುಪಡಿಸಿದ ಕ್ರಮವನ್ನು ಪ್ರಶ್ನಿಸಿ ಹಿರಿಯ ವಕೀಲ ಸಂಜಯ್ ಹೆಗ್ಡೆಯವರು ಸಲ್ಲಿಸಿದ ಅರ್ಜಿಯ ಸಂಬಂಧ ಕೇಂದ್ರ ಸರ್ಕಾರ ಈ ಅಫಿಡವಿಟ್ ಸಲ್ಲಿಸಿದೆ.
"ಬಳಕೆದಾರರಿಗೆ ನೋಟಿಸ್ ನೀಡಿ ಪ್ಲಾಟ್‍ಫಾರಂನ ವ್ಯಾಜ್ಯ ಅಧಿಕಾರಿಯನ್ನು ಸಂಪರ್ಕಿಸುವ ಹಕ್ಕು ಸೇರಿದಂತೆ ಸಹಜ ನ್ಯಾಯದ ಪಾರದರ್ಶಕ ಪ್ರಕ್ರಿಯೆ ಅನುಸರಿಸಿ" ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಹೇಳಿದೆ.
ಸಾಮಾಜಿಕ ಜಾಲತಾಣಗಳಿಂದ ಕಿತ್ತುಹಾಕುವ ಕ್ರಮವು ಸಂವಿಧಾನದ 14, 19 ಮತ್ತು 21ನೇ ವಿಧಿಯ ಆಶಯಕ್ಕೆ ವಿರುದ್ಧವಾದದ್ದು ಎಂದು ಸಚಿವಾಲಯ ಹೇಳಿದೆ.