ನ್ಯಾಯಾಲಯ ನಿಂದನೆ ಆರೋಪ : ಮೂವರು ಐಎಎಸ್ ಅಧಿಕಾರಿಗಳಿಗೆ ಒಂದು ತಿಂಗಳು ಜೈಲು
ಅಮರಾವತಿ: ನ್ಯಾಯಾಂಗ ನಿಂದನೆ ಆರೋಪದಲ್ಲಿ ಆಂಧ್ರಪ್ರದೇಶದ ವಿಶೇಷ ಮುಖ್ಯ ಕಾರ್ಯದರ್ಶಿ ಸೇರಿದಂತೆ ಮೂವರು ಹಿರಿಯ ಐಎಎಸ್ ಅಧಿಕಾರಿಗಳಿಗೆ ಒಂದು ತಿಂಗಳು ಜೈಲು ಶಿಕ್ಷೆ ಹಾಗೂ ತಲಾ 2000 ರೂ. ದಂಡ ವಿಧಿಸಿ ಆಂಧ್ರಪ್ರದೇಶ ಹೈಕೋರ್ಟ್ ಶುಕ್ರವಾರ ಆದೇಶ ನೀಡಿದೆ.
ಕೃಷಿ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ಪೂನಮ್ ಮಲಕೊಂಡಯ್ಯ, ಕೃಷಿ ಇಲಾಖೆಯ ಹಿಂದಿನ ಆಯುಕ್ತ ಎಚ್.ಅರುಣ್ ಕುಮಾರ್ ಮತ್ತು ಹಿಂದಿನ ಕರ್ನೂಲ್ ಜಿಲ್ಲಾಧಿಕಾರಿಯಾಗಿದ್ದ ಜಿ.ವೀರಪಾಂಡ್ಯನ್ ಅವರು ಶಿಕ್ಷೆಗೆ ಒಳಗಾದ ಅಧಿಕಾರಿಗಳು.
ನ್ಯಾಯಾಲಯ ನಿಗದಿಪಡಿಸಿದ ಅವಧಿಯಲ್ಲಿ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ವಿಫಲರಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪದಲ್ಲಿ ಈ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಮೂರ್ತಿ ಬಿ.ದೇವಾನಂದ ಅವರು ತಿಳಿಸಿದ್ದಾರೆ.
2019ರ ಅಕ್ಟೋಬರ್ ನಲ್ಲಿ, ಗ್ರಾಮ ಕೃಷಿ ಸಹಾಯಕರ ಹುದ್ದೆಗೆ ಅರ್ಜಿದಾರರ ಅಭ್ಯರ್ಥಿತನವನ್ನು ಪರಿಗಣಿಸುವಂತೆ ಸರ್ಕಾರಿ ಅಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ನೀಡಿತ್ತು ಹಾಗೂ ಎರಡು ವಾರಗಳ ಒಳಗಾಗಿ ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿತ್ತು. ಆದರೆ ಹೈಕೋರ್ಟ್ ಆದೇಶ ಜಾರಿಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಅರ್ಜಿದಾರರು ನ್ಯಾಯಾಂಗ ನಿಂದನೆ ದಾವೆ ದಾಖಲಿಸಿದ್ದರು. 2020ರಲ್ಲಿ ನ್ಯಾಯಾಂಗ ನಿಂದನೆ ದಾವೆ ಸಲ್ಲಿಕೆಯಾದ ಬಳಿಕ ಅರ್ಜಿದಾರರನ್ನು ಗ್ರಾಮ ಕೃಷಿ ಸಹಾಯಕ ಹುದ್ದೆಗೆ ಪರಿಗಣಿಸಲು ಅನರ್ಹ ಎಂದು ಘೋಷಿಸಿದ್ದರು.