×
Ad

ಮೇ 14ರಂದು ಉಡುಪಿಯಲ್ಲಿ ರಾಜ್ಯಮಟ್ಟದ ಸಾಮರಸ್ಯ ನಡಿಗೆ

Update: 2022-05-07 19:42 IST

ಉಡುಪಿ : ಅಂಬೇಡ್ಕರ್, ಬಸವಣ್ಣ, ನಾರಾಯಣ ಗುರು, ಕುವೆಂಪು ಅವರ ಸರ್ವ ಜನಾಂಗಗಳ ಶಾಂತಿಯ ತೋಟದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಬಹುತ್ವ ಭಾರತದ ಬೃಹತ್ ರಾಜ್ಯಮಟ್ಟದ ಸಾಮರಸ್ಯ ನಡಿಗೆ ಹಾಗೂ ಸಹಬಾಳ್ವೆ ಸಮಾವೇಶವನ್ನು ಉಡುಪಿಯಲ್ಲಿ ಮೇ 14ರಂದು ಹಮ್ಮಿಕೊಳ್ಳ ಲಾಗಿದೆ.

ಉಡುಪಿಯ ಮಣಿಪಾಲ ಇನ್ ಹೊಟೇಲಿನಲ್ಲಿ ಶನಿವಾರ ಕರೆದ ಸುದ್ದಿ ಗೋಷ್ಠಿಯಲ್ಲಿ ಸಮಾವೇಶದ ಸಂಚಾಲಕ ಸಮಿತಿಯ ಕೆ.ಎಲ್.ಅಶೋಕ್ ಈ ಕುರಿತು ಮಾಹಿತಿ ನೀಡಿದರು.

ಸಹಬಾಳ್ವೆ ಉಡುಪಿ ಮತ್ತು ಕರ್ನಾಟಕದ ಸಮಸ್ತ ಸೌಹಾರ್ದ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಮಿಷನ್ ಕಂಪೌಂಡಿನ ಕ್ರಿಶ್ಚಿಯನ್ ಶಾಲೆ ಮೈದಾನದಲ್ಲಿ ನಡೆಯಲಿರುವ ಈ ಸಮಾವೇಶ ವನ್ನು ಅಂದು ಸಂಜೆ 4 ಗಂಟೆಗೆ ಸರ್ವಧರ್ಮಗಳ ಧರ್ಮಗುರುಗಳು ಉದ್ಘಾಟಿಸಲಿರುವರು ಎಂದರು.

ಮಧ್ಯಾಹ್ನ 2 ಗಂಟೆಗೆ ಅಜ್ಜರಕಾಡು ಹುತಾತ್ಮ ಸ್ಮಾರಕ ಚೌಕದ ಬಳಿಯಿಂದ ಆರಂಭಗೊಳ್ಳಲಿರುವ ಸಾಮರಸ್ಯ ನಡಿಗೆಗೆ ವಿವಿಧ ರಾಜ್ಯ ಸಂಘಟನೆಗಳ ನಾಯಕರುಗಳು ಚಾಲನೆ ನೀಡಲಿರುವರು. ಸಮಾವೇಶದಲ್ಲಿ ಸೌಹಾರ್ದ ಪರಂಪರೆಯನ್ನು ಬಿಂಬಿಸುವ ಗೀತೆಗಳ ಗಾಯನವನ್ನು ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ ಮತ್ತು ತಂಡ ನಡೆಸಿಕೊಡಲಿದೆ.

ವಿಶೇಷ, ಮುಖ್ಯ ಅತಿಥಿಗಳು

ವಿಶೇಷ ಅತಿಥಿಗಳಾಗಿ ಮಾನವ ಹಕ್ಕುಗಳ ಹೊರಾಟಗಾರ ಯೋಗೇಂದ್ರ ಯಾದವ್, ಕರ್ನಾಟಕ ಕ್ರೈಸ್ತ ಸಂಘಗಳ ಅಂತಾರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಡಾ.ರೊನಾಲ್ಡ್ ಕೊಲಾಸೊ, ನಿವೃತ್ತ ಐಎಎಸ್ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತ ಶಶಿಕಾಂತ್ ಸೆಂಥಿಲ್ ಭಾಗವಹಿಸಲಿರುವರು.

ದಸಂಸ ಮುಖಂಡರಾದ ಮಾವಳ್ಳಿ ಶಂಕರ್, ಆರ್.ಮೋಹನ್‌ರಾಜ್, ರೈತ ಮುಖಂಡರಾದ ಎಚ್.ಆರ್. ಬಸವರಾಜಪ್ಪ, ಚಾಮರಸ ಮಾಲಿ ಪಾಟೀಲ್, ಚುಕ್ಕಿ ನಂಜುಂಡ ಸ್ವಾಮಿ, ಮಹಿಳಾ ಹಕ್ಕು ಹೋರಾಟಗಾರ್ತಿ ಕೆ.ನೀಲಾ, ಡಾ. ಬೆಳಗಾಮಿ ಮುಹಮ್ಮದ್ ಸಅದ್, ಸಬೀಹಾ ಫಾತಿಮ, ನಜ್ಮಾ ಚಿಕ್ಕನೇರಳೆ ಮುಖ್ಯ ಅತಿಥಿಗಳಾಗಿರುವರು. ಇದರಲ್ಲಿ ರಾಜ್ಯಮಟ್ಟದ ದಲಿತ, ಆದಿವಾಸಿ, ರೈತ, ಗಿರಿಜನ, ಅಲೆಮಾರಿ, ಲೈಂಗಿಕ ಅಲ್ಪಸಂಖ್ಯಾತರ, ಮುಸ್ಲಿಮರ, ಕ್ರಿಶ್ಚಿಯನ್ನರ, ಮಹಿಳೆಯರ, ಕಾರ್ಮಿಕ, ಕನ್ನಡ ಪರ ಸಂಘಟನೆಗಳು ಭಾಗವಹಿಸಲಿವೆ ಎಂದು ಅವರು ತಿಳಿಸಿದರು.

ರಾಜಕೀಯ, ಸಾಮಾಜಿಕ ವಾತಾವರಣ ಕಲುಷಿತಗೊಳ್ಳುತ್ತಿದೆ, ದ್ವೇಷವೇ ನಮ್ಮ ಇತಿಹಾಸ ಬಿಂಬಿಸಲಾಗುತ್ತಿದೆ ಹಾಗೂ ಧರ್ಮ ರಾಜಕಾರಣವೇ ಪ್ರಸ್ತುತ ವಿದ್ಯಾಮಾನ ಎಂಬುದಾಗಿ ಚರ್ಚೆಗಳು ನಡೆಯುವಂತೆ ಮಾಡ ಲಾಗುತ್ತದೆ ಎಂದ ಅವರು, ಮುಂದಿನ ತಲೆಮಾರು ಈ ನೆಲದ ಸೌಹಾರ್ದ, ಸಹಬಾಳ್ವೆಯ ರಥವನ್ನು ಮುನ್ನಡೆಸುವ ನಿಟ್ಟಿನಲ್ಲಿ ಬಹಳ ದೊಡ್ಡ ನಿರ್ಣಯವನ್ನು ಈ ಸಮಾವೇಶದಲ್ಲಿ ತೆಗೆದುಕೊಳ್ಳಲಾಗುವುದು ಎಂದರು.  

ಸುದ್ದಿಗೋಷ್ಠಿಯಲ್ಲಿ ಸಮಾವೇಶದ ಸಂಚಾಲಕ ಸಮಿತಿಯ ಪದಾಧಿಕಾರಿ ಗಳಾದ ಸುಂದರ್ ಮಾಸ್ತರ್, ಯಾಸೀನ್ ಮಲ್ಪೆ, ಹುಸೇನ್ ಕೋಡಿಬೆಂಗ್ರೆ, ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು.

25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ

ರಾಜ್ಯಮಟ್ಟದ ಈ ಐತಿಹಾಸಿಕ ಸಮಾವೇಶದಲ್ಲಿ ಸುಮಾರು 20-25ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಸಂಚಾಲಕ ಸಮಿತಿಯ ಅಮೃತ್ ಶೆಣೈ ತಿಳಿಸಿದರು.

ರಾಜ್ಯದ 31 ಜಿಲ್ಲೆಗಳ ಪ್ರತಿ ತಾಲೂಕಿನಿಂದ ಪ್ರಾತಿನಿಧಿಕವಾಗಿ ಹಾಗೂ ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡ, ಚಿತ್ರದುರ್ಗು ಜಿಲ್ಲೆಗಳಿಂದ ಸಾವಿರಾರು ಸಂಖ್ಯೆ ಯಲ್ಲಿ ಜನ ಆಗಮಿಸಲಿರುವರು.

ಸಮಾವೇಶಕ್ಕಾಗಿ ಸುಮಾರು 300 ಮಂದಿ ಸ್ವಯಂ ಸೇವಕರನ್ನು ನಿಯೋಜಿಸ ಲಾಗುತ್ತದೆ. ಅಲ್ಲದೆ ಎಲ್ಲರಿಗೂ ಸಮಾವೇಶವನ್ನು ಕಾಣಲು ಅನುಕೂಲವಾಗು ವಂತೆ ಮೈದಾನದ ನಾಲ್ಕು ಕಡೆಗಳಲ್ಲಿ ಎಲ್‌ಇಡಿ ಪರದೆಗಳನ್ನು ಆಳವಡಿಸ ಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಭಾಗವಹಿಸುವ ವಿವಿಧ ಧರ್ಮಗುರುಗಳು

ಬಾಲ್ಕಿ ಹಿರೇಮಠ ಸಂಸ್ಥಾನದ ಶ್ರೀಗುರುಬಸವ ಪಟ್ಟದೇವರು, ಉಡುಪಿ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ಉಡುಪಿ ಜಿಲ್ಲಾ ಖಾಝಿ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಪುತ್ತೂರು ಮಲಂಕರ ಕ್ಯಾಥೋಲಿಕ್ ಚರ್ಚ್ ಬಿಷಪ್ ಅ.ವಂ.ಜೀ ವರ್ಗೀಸ್ ಮಾರ್ ಮಕರಿಯೋಸ್, ಮೈಸೂರು ಬಸವ ಜ್ಞಾನ ಮಂದಿರದ ಡಾ.ಮಾತೆ ಬಸವಾಂಜಲಿ ದೇವಿ, ಬೆಳಗಾವಿ ಬಸವ ಮಂಟಪದ ಬಸವ ಧರ್ಮ ಪೀಠದ ಶ್ರೀಬಸವ ಪ್ರಕಾಶ್ ಸ್ವಾಮೀಜಿ, ಬೆಂಗಳೂರು ಲೋಕರತ್ನ ಬುದ್ಧ ವಿಹಾರದ ಭಂತೆ ಮಾತೆ ಮೈತ್ರಿ, ಕರ್ನಾಟಕ ಜಮೀಯ್ಯತುಲ್ ಉಲೆಮಾಯೆ ಹಿಂದ್ ಅಧ್ಯಕ್ಷ ಮೌಲಾನ ಇಫ್ತಿಕಾರ್ ಅಹ್ಮದ್ ಕಾಸ್ಮಿ, ಆರ್ಯ ಈಡಿಗ ಮಹಾ ಮಂಡಳಿಯ ರಾಷ್ಟ್ರೀಯ ಅಧ್ಯಕ್ಷ ಡಾ.ಪ್ರಣವಾನಂದ ಸ್ವಾಮೀಜಿ, ಕರ್ನಾಟಕ ಸುನ್ನೀ ಯುವಜನ ಸಂಘದ ಅಧ್ಯಕ್ಷ ಡಾ.ಎಂ.ಎಸ್.ಎಂ.ಅಬ್ದುಲ್ ರಶೀದ್ ಸಖಾಫಿ, ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ರೆವರೆಂಡ್ ಡಾ.ಹರ್ಬಟ್ ಎಂ.ವಾಟ್ಸನ್, ಕರ್ನಾಟಕ ರಾಜ್ಯ ದಾರಿಮಿ ಉಲೆಮಾ ಒಕ್ಕೂಟದ ಕಾರ್ಯದರ್ಶಿ ಮೌಲಾನ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ. ಚೇತನ್ ಲೋಬೊ, ಮಣಿಪಾಲ ಗುರುದ್ವಾರದ ಜ್ಞಾನಿ ಬಲರಾಜ್ ಸಿಂಗ್.

ಬಹುತ್ವ ಭಾರತ ಬಿಂಬಿಸುವ ಮೆರವಣಿಗೆ

ಅಜ್ಜರಕಾಡು ಹುತಾತ್ಮ ಸ್ಮಾರಕದಿಂದ ಆರಂಭಗೊಳ್ಳುವ ಸಾಮರಸ್ಯದ ನಡಿಗೆ, ಜೋಡುಕಟ್ಟೆ, ಕೋರ್ಟ್ ರಸ್ತೆ, ಹಳೆಯ ಡಯಾನ ಸರ್ಕಲ್, ಕೆ.ಎಂ.ಮಾರ್ಗ. ಸರ್ವಿಸ್ ಬಸ್ ನಿಲ್ದಾಣವಾಗಿ ವಾಪಾಸ್ಸು ಅದೇ ಮಾರ್ಗದಲ್ಲಿ ಸಂಚರಿಸಿ, ಮಿಷನ್ ಕಂಪೌಂಡಿನ ಮೈದಾನದಲ್ಲಿ ಸಮಾಪ್ತಿಗೊಳ್ಳಲಿದೆ.

ದೇಶ ಹಾಗೂ ಸ್ಥಳೀಯ ಸೌಹಾರ್ದ ಸಂಸ್ಕೃತಿಯನ್ನು ಬಿಂಬಿಸುವ 20ಕ್ಕೂ ಅಧಿಕ ಟ್ಯಾಬ್ಲೋ ಹಾಗೂ ಸಾಂಸ್ಕೃತಿಕ ತಂಡಗಳು ಮೆರವಣಿಗೆಯಲ್ಲಿ ಇರಲಿವೆ. ಅಂಬೇಡ್ಕರ್, ವಿವೇಕಾನಂದ, ನಾರಾಯಣಗುರು, ಮದರ್ ತೆರೇಸಾ, ಹಾಜಿ ಅಬ್ದುಲ್ಲಾ ಸಾಹೇಬ್, ಮಾಧವ ಮಂಗಳ, ಮೊಗವೀರ ಸಮುದಾಯದ ಸಂಸ್ಕೃತಿ ಬಿಂಬಿಸುವ ಟ್ಯಾಬ್ಲೋಗಳು ಪ್ರಮುಖವಾಗಿವೆ.

"ಸಮಾವೇಶದ ಮೂಲಕ ನಾವು ಪ್ರೀತಿ ಹಾಗೂ ಸಹಬಾಳ್ವೆ ಹಂಚುವ ಕೆಲಸ ಮಾಡುತ್ತೇವೆ. ಸಹಬಾಳ್ವೆ ಎಂಬುದು ಈ ನೆಲ, ಸಂಸ್ಕೃತಿ ಹಾಗೂ ಪ್ರಕೃತಿಯ ನಿಯಮವಾಗಿದೆ. ಇದನ್ನು ಸಕಾರಗೊಳಿಸುವುದು ಸಮಾವೇಶದ ಬಹು ದೊಡ್ಡ ಆಶಯವಾಗಿದೆ. ನಾವು ಯಾವುದೇ ರೀತಿ ಕೋಮು ಧ್ರುಮಿಕರಣಕ್ಕೆ ಒಳಗಾಗುವು ದಿಲ್ಲ, ಸೌಹಾರ್ದದ ಸೇತುವೆಯನ್ನು ಒಡೆಯಲು ಬಿಡುವುದಿಲ್ಲ. ಎಲ್ಲ ಧರ್ಮಗಳ ಸಾರದಂತೆ ಮನುಷ್ಯ ಪ್ರೀತಿ ಹಾಗೂ ಯಾವ ಧರ್ಮ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ ಎಂಬ ಸಮಾನತೆ ತತ್ವದಡಿಯಲ್ಲಿ ಸಮಾವೇಶ ನಡೆಯಲಿದೆ".
-ಕೆ.ಎಲ್.ಅಶೋಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News