×
Ad

ಅಮೃತ ಸರೋವರ್ ಯೋಜನೆಯಡಿ 75 ಕೆರೆಗಳ ಅಭಿವೃದ್ಧಿ: ಸಂಸದೆ ಶೋಭಾ ಕರಂದ್ಲಾಜೆ

Update: 2022-05-07 20:32 IST

ಉಡುಪಿ : ಪ್ರಧಾನ ಮಂತ್ರಿಗಳ ಮಹಾತ್ವಾಕಾಂಕ್ಷೆಯ ಯೋಜನೆ  ಅಮೃತ ಸರೋವರ್ ಅಡಿಯಲ್ಲಿ ಪ್ರತಿ ಜಿಲ್ಲೆಗಳಲ್ಲಿ ಒಂದು ಎಕರೆಗಿಂತ ಜಾಸ್ತಿ ವಿಸ್ತ್ರೀರ್ಣ ಹೊಂದಿರುವ 75 ಕೆರೆಗಳನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸ ಲಾಗಿದ್ದು, ಇದಕ್ಕೆ ಸಂಬಂಧಿಸಿ ಇಡೀ ದೇಶಕ್ಕೆ ಒಂದೇ ರೀತಿಯ ಮಾರ್ಗಸೂಚಿ ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಹಾಗೂ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 75 ಕೆರೆ ಅಥವಾ ಕಲ್ಯಾಣಿಗಳನ್ನು ಗುರುತಿಸುವ ಕಾರ್ಯವನ್ನು ಮಾಡಬೇಕು. ಇದಕ್ಕೆ ನರೇಗಾ, ಸಿ.ಎಸ್.ಆರ್ ನಿಧಿ, ಶಾಸಕರ, ಸಂಸದರ ನಿಧಿ ಸೇರಿದಂತೆ ಇತರೆ ಇಲಾಖೆಗಳ ಅನುದಾನವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಹೊಸ ಕೆರೆ ನಿರ್ಮಾಣ ಅಥವಾ ಹಾಲಿ ಕೆರೆಗಳ ಅಭಿವೃದ್ಧಿಯನ್ನು ಕೂಡ ಈ ಯೋಜನೆಯಲ್ಲಿ ಮಾಡಬಹುದಾಗಿದೆ ಎಂದರು.

ಕೇಂದ್ರ ಸಚಿವರಿಗೆ ಪತ್ರ

ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಸೌಲಭ್ಯವನ್ನು ಒದಗಿಸುವ ಸ್ವ-ನಿಧಿಯ ಸಾಲವನ್ನು 50 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಕಳೆದ ಸಾಲಿನಲ್ಲಿ ಸ್ವ-ನಿಧಿ ಯೋಜನೆಯಡಿ 3500 ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದು ಶೇ.82 ರಷ್ಟು ಸಾಧನೆ ಮಾಡಲಾಗಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ಈ ಯೋಜನೆಯ ಅನುಷ್ಠಾನಕ್ಕೆ ಕೆಲವು ಖಾಸಗಿ ಬ್ಯಾಂಕುಗಳು ಸಹಕಾರ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಕೇಂದ್ರ ಸರಕಾರದ ಯೋಜನೆ ಗಳಿಗೆ ಸಹಕಾರ ನೀಡದ ಬ್ಯಾಂಕ್‌ಗಳನ್ನು ಗುರುತಿಸಿ, ಸರಕಾರದ ಠೇವಣಿ ಹಣ ವಾಪಾಸು ಪಡೆಯುವುದರ ಜೊತೆಗೆ ಕೇಂದ್ರ ಸರಕಾರದ ಹಣಕಾಸು ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಹೆದ್ದಾರಿ ಮೇಲ್ಸೇತುವೆ ಕಾಮಗಾರಿ

ಅಂಬಲಪಾಡಿ ಹಾಗೂ ಸಂತೆಕಟ್ಟೆಯಲ್ಲಿ ಮೇಲು ಸೇತುವೆ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭಿಸಲಾಗು ವುದು. ಕಟಪಾಡಿ ಮೇಲು ಸೇತುವೆ ಕಾಮಗಾರಿಯು ೨-೩ ತಿಂಗಳು ವಿಳಂಬವಾಗಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.

ರಾಷ್ಟ್ರೀಯ ಹೆದ್ದಾರಿಯ ಬಾಕಿ ಉಳಿದ ಕಾಮಗಾರಿಗಳನ್ನು ಶೀಘ್ರದಲ್ಲಿ ಕೈಗೊಳ್ಳುವುದರೊಂದಿಗೆ ಹೆದ್ದಾರಿಗಳಲ್ಲಾಗುವ ಅಪಘಾತಗಳನ್ನು ತಪ್ಪಿಸಬೇಕು. ಜಿಲ್ಲೆಯಲ್ಲಿ ಈಗಾಗಲೇ 30 ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಅಗತ್ಯ ಇರುವ ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಂಡು ಅಪಘಾತವನ್ನು ತಪ್ಪಿಸಬೇಕು ಎಂದ ಸಚಿವರು ತಿಳಿಸಿದರು.

ಕಲ್ಸಂಕ ಸರ್ಕಲ್ ವೃತ್ತ ನಿರ್ಮಾಣಕ್ಕೆ 30 ಕೋಟಿ ರೂ. ಅನುದಾನದ ಪ್ರಸ್ತಾವ ವನ್ನು ಕಳುಹಿಸಲಾಗಿದೆ. ಇದಕ್ಕೆ ಒಂದು ಎಕರೆ ಜಾಗ ಬೇಕಾಗಿದೆ. ಈಗಾಗಲೇ ೫೦ ಸೆಂಟ್ಸ್ ಜಾಗ ನಮ್ಮಲ್ಲಿ ಇದೆ. ಉಳಿದ ಭೂಮಿ ಸ್ವಾಧೀನಕ್ಕೆ 15 ಕೋಟಿ ಮೀಸಲಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಜಿಲ್ಲೆಯಿಂದ ಮೀನು ರಫ್ತು

ಜಿಲ್ಲೆಯಲ್ಲಿ ಹಿಡಿದ ಮೀನಿಗೆ ಉತ್ತಮ ಧಾರಣೆ ಸಿಗದ ಕಾರಣಕ್ಕೆ ಕೇರಳದ ಕೊಚ್ಚಿನ್ ಮೂಲಕ ವಿದೇಶಕ್ಕೆ ರಪ್ತಾಗುತ್ತಿವೆ. ಆದುದರಿಂದ ಜಿಲ್ಲೆಯಿಂದಲೇ ಹೊರ ದೇಶಕ್ಕೆ ಮೀನು ರಫ್ತಾಗುವ ವ್ಯವಸ್ಥೆಯನ್ನು ಕಲ್ಪಿಸಬೇಕು. ಅದಕ್ಕಾಗಿ  ಮೀನುಗಾರಿಕಾ ಇಲಾಖಾ ಅಧಿಕಾರಿಗಳು ಯೋಜನೆ ರೂಪಿಸಿದರೆ ಕೇಂದ್ರದಿಂದ ನೆರವು ನೀಡಲಾಗು ವುದು ಎಂದು ಸಚಿವರು ಹೇಳಿದರು.

ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ 7 ಲಕ್ಷ ಮಾನವ ದಿನಗಳ ಗುರಿಯನ್ನು ನೀಡಲಾಗಿದ್ದು, ಪ್ರಸ್ತುತ ೯.೨೫ ಲಕ್ಷ ಮಾನವ ದಿನಗಳ ಕೂಲಿ ಕಾರ್ಯಗಳನ್ನು ಮಾಡುವುದರೊಂದಿಗೆ ಶೇ.೧೩೨.೧೪ರಷ್ಟು ಗುರಿ ಸಾಧಿಸ ಲಾಗಿದೆ. ಇದರಲ್ಲಿ ಕಾರ್ಮಿಕರ ಹಣ ಪಾವತಿಯಾಗಿದೆ. ಆದರೆ ಸಲಕರಣೆಗಳ ಹಣ ಬಾಕಿ ಇದೆ. ಅದನ್ನು ಬಿಡುಗಡೆ ಮಾಡಿದರೆ ಇನ್ನಷ್ಟು ಸಾಧನೆ ಮಾಡ ಬಹುದಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮೊದಲನೇ, ಎರಡನೇ ಹಾಗೂ ಮೂರನೇ ಹಂತದ ೩೧ ರಸ್ತೆ ಕಾಮಗಾರಿಗಳನ್ನು ೯೦.೨೮ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈಗಾಗಲೇ ಕೆಲವು ಕಾಮಗಾರಿಗಳು ಮುಗಿದಿವೆ. ಬಾಕಿ ಉಳಿದ ಕಾಮಗಾರಿಗಳನ್ನು ಮಳೆಗಾಲಕ್ಕೆ ಮೊದಲು ಪೂರ್ಣಗೊಳಿಸಬೇಕು ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಶಾಸಕರಾದ ಸುಕುಮಾರ ಶೆಟ್ಟಿ, ಲಾಲಾಜಿ ಆರ್.ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಪಂ ಸಿಇಓ ಡಾ.ನವೀನ್ ಭಟ್ ಉಪಸ್ಥಿತರಿದ್ದರು.

‘ಜಿಲ್ಲಾ ಕೃಷಿ ಕ್ರಿಯಾ ಯೋಜನೆ ತಯಾರಿಸಿ’

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಕೃಷಿ ಮೂಲ ಸೌಕರ್ಯ ನಿಧಿ ಅಡಿಯಲ್ಲಿ ದೇಶದಾದ್ಯಂತ ೧ ಲಕ್ಷ ಕೋಟಿ ಅನುದಾನವು ಮೀಸಲಿಡಲಾಗಿದೆ. ರಾಜ್ಯಕ್ಕೆ 14000 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ಸ್ವ-ಸಹಾಯ ಗುಂಪುಗಳು, ಖಾಸಗಿ ವ್ಯಕ್ತಿಗಳು ಅಥವಾ ಸಹಕಾರಿ ಸಂಘದವ ರಿಗೆ ೨ ಕೋಟಿ ರೂ.ವರೆಗೆ ಶೇ.೩ರಷ್ಟು ಬಡ್ಡಿಯ ಆರ್ಥಿಕ ನೆರವನ್ನು ನೀಡಿ, ಪ್ರಯೋಗಾಲಯ, ಆಹಾರ ಸಂಸ್ಕರಣಾ ಘಟಕಗಳು, ಕೋಲ್ಡ್ ಸ್ಟೋರೆಜ್‌ಗಳು, ಮಣ್ಣು ಪರೀಕ್ಷಾ ಕೇಂದ್ರಗಳು, ಗೋದಾಮು ಸೇರಿದಂತೆ ಮತ್ತಿತರ ಕೃಷಿ ಆಧಾರಿತ ಸೌಕರ್ಯಗಳನ್ನು ನಿರ್ಮಾಣ ಮಾಡಬಹುದಾಗಿದೆ. ಕೃಷಿಗೆ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳನ್ನು ಈ ಯೋಜನೆಯಡಿ ಕೈಗೊಳ್ಳಲು ಜಿಲ್ಲಾ ಕೃಷಿ ಕ್ರಿಯಾ ಯೋಜನೆಯನ್ನು ತಯಾರಿಸಬೇಕು ಎಂದು ಅವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News