ಬಿಜೆಪಿ ನಾಯಕ ಬಗ್ಗಾ ವಿರುದ್ಧ ಮೇ 10ರ ವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ
Update: 2022-05-08 10:31 IST
ಚಂಡೀಗಢ: ಮೇ 10ರ ವರೆಗೆ ಬಿಜೆಪಿ ನಾಯಕ ತಜೀಂದರ್ ಬಗ್ಗಾ ಅವರನ್ನು ಬಂಧಿಸದಂತೆ ಹಾಗೂ ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳದಂತೆಯು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶನಿವಾರ ರಾತ್ರಿ ಆದೇಶಿಸಿದೆ.
ಮೊಹಾಲಿ ಕೋರ್ಟ್ ಶನಿವಾರ ಜಾರಿಗೊಳಿಸಿದ್ದ ಜಾಮೀನು ರಹಿತ ಬಂಧನ ವಾರಂಟ್ ಅನ್ನು ಪ್ರಶ್ನಿಸಿ ಬಗ್ಗಾ ಶನಿವಾರ ಹೈಕೋರ್ಟ್ ಮೊರೆಹೋಗಿದ್ದರು.
ಮಧ್ಯರಾತ್ರಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಬಗ್ಗಾ ವಿರುದ್ಧದ ಬಂಧನ ವಾರಂಟ್ ಗೆ ತಡೆ ನೀಡಿ, ಮೇ 10ರ ವರೆಗೆ ಅವರ ವಿರುದ್ಧ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಶನಿವಾರ ಮಧ್ಯರಾತ್ರಿ ನ್ಯಾಯಮೂರ್ತಿ ಅನೂಪ್ ಚಿತ್ಕಾರ ಅವರ ಚಂಡೀಗಢದ ನಿವಾಸದಲ್ಲಿ ಅರ್ಜಿಯ ವಿಚಾರಣೆ ನಡೆಯಿತು.
ಪ್ರಚೋದನಕಾರಿ ಹೇಳಿಕೆ, ದ್ವೇಷ ಪ್ರಚೋದನೆ, ಬೆದರಿಕೆಯೊಡ್ಡಿದ ಆರೋಪದ ಮೇಲೆ ಪಂಜಾಬ್ ಪೊಲೀಸರು ತಜೀಂದರ್ ಪಾಲ್ ಸಿಂಗ್ ಬಗ್ಗಾ ವಿರುದ್ಧ ಪ್ರಕರಣ ದಾಖಲಿಸಿದ್ದರು.