ಸಶಸ್ತ್ರ ದಾಳಿ: ಈಜಿಪ್ಟ್ ನ 11 ಭದ್ರತಾ ಸಿಬ್ಬಂದಿ ಮೃತ್ಯು
ಕೈರೊ, ಮೇ 8: ಸಿನಾಯಿ ಪ್ರಾಂತದಲ್ಲಿ ನಡೆದ ಸಶಸ್ತ್ರ ದಾಳಿಯಲ್ಲಿ ಈಜಿಪ್ಟ್ ಸೇನೆಯ ಅಧಿಕಾರಿ ಸಹಿತ ಕನಿಷ್ಟ 11 ಭದ್ರತಾ ಸಿಬಂದಿ ಮೃತಪಟ್ಟಿರುವುದಾಗಿ ಸೇನೆಯ ವಕ್ತಾರರು ಹೇಳಿದ್ದಾರೆ.
ಇದೇ ವೇಳೆ, ಸೂಯೆಝ್ ಕಾಲುವೆಯ ಪೂರ್ವದಲ್ಲಿರುವ ನೀರೆತ್ತುವ ಕೇಂದ್ರವನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ದಾಳಿಯನ್ನು ಭದ್ರತಾ ಪಡೆ ವಿಫಲಗೊಳಿಸಿದೆ ಎಂದು ವಕ್ತಾರರು ಹೇಳಿದ್ದಾರೆ. ಆಗ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರ ಸಹಿತ 11 ಭದ್ರತಾ ಸಿಬಂದಿ ಮೃತಪಟ್ಟಿದ್ದು 5 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.
ಯೋಧರ ಸಾವಿನ ಬಗ್ಗೆ ಸಂತಾಪ ಸೂಚಿಸಿರುವ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ಸಿಸ್ಸಿ, ಬಂಡುಗೋರರ ವಿರುದ್ಧದ ಹೋರಾಟ ಮುಂದುವರಿಯಲಿದೆ ಮತ್ತು ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೆಸೆಯಲಾಗುವುದು ಎಂದಿದ್ದಾರೆ.
ಇಸ್ಮಾಯಿಲಾ ಪ್ರಾಂತದ ಖಂಟಾರ ನಗರದಲ್ಲಿ ದಾಳಿ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ ಎಂದು ವರದಿಯಾಗಿದೆ.