ಶಾಹೀನ್‌ಬಾಗ್ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪಕ್ಕೆ ಸರ್ವೋಚ್ಚ ನ್ಯಾಯಾಲಯದ ನಕಾರ

Update: 2022-05-09 15:05 GMT

ಹೊಸದಿಲ್ಲಿ,ಮೇ 9: ಇತ್ತೀಚಿಗಷ್ಟೇ ದಿಲ್ಲಿಯ ಜಹಾಂಗೀರ್ಪುರಿಯಲ್ಲಿ ಅಕ್ರಮ ಕಟ್ಟಡಗಳನ್ನು ಧ್ವಂಸಗೊಳಿಸಿದ್ದ ಬುಲ್ಡೋಜರ್ಗಳು ಸೋಮವಾರ ಮತ್ತೆ ಸದ್ದು ಮಾಡಿವೆ. ಸಿಎಎ ವಿರುದ್ಧದ ಪ್ರತಿಭಟನೆಗಳಿಂದಾಗಿ ರಾಷ್ಟ್ರಮಟ್ಟದಲ್ಲಿ ಗಮನವನ್ನು ಸೆಳೆದಿದ್ದ ದಿಲ್ಲಿಯ ಶಾಹೀನ್ಬಾಗ್ನಲ್ಲಿ ನೂರಾರು ಸ್ಥಳೀಯರ ತೀವ್ರ ವಿರೋಧದ ನಡುವೆಯೇ ಆರಂಭಗೊಂಡ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು,ಪೂರ್ವಭಾವಿ ನೋಟಿಸ್ಗಳನ್ನು ನೀಡದೆ ತೆರವು ಕಾರ್ಯಾಚರಣೆಯನ್ನು ಆರಂಭಿಸಿದ್ದಕ್ಕಾಗಿ ಬಿಜೆಪಿ ಆಡಳಿತದ ದಕ್ಷಿಣ ದಿಲ್ಲಿ ಮಹಾನಗರ ಪಾಲಿಕೆಯನ್ನು ತರಾಟೆಗೆತ್ತಿಕೊಂಡಿತು.

ನೇರವಾಗಿ ಪೀಡಿತರಾಗಿರುವ ನಿವಾಸಿಗಳು ಅಥವಾ ಅಂಗಡಿಕಾರರ ಬದಲು ರಾಜಕೀಯ ಪಕ್ಷವೇಕೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ ಎಂದು ಪೀಠವು ಅರ್ಜಿದಾರರ ಪರ ಹಿರಿಯ ವಕೀಲ ಪಿ.ಸುಂದರನಾಥ ಅವರನ್ನು ಪ್ರಶ್ನಿಸಿತು.

‘ಈ ಸಿಪಿಎಂ ಪಕ್ಷವೇಕೆ ಪ್ರಕರಣವನ್ನು ದಾಖಲಿಸುತ್ತಿದೆ? ಪೀಡಿತ ವ್ಯಕ್ತಿಗಳು ಇಲ್ಲಿಗೆ ಬಂದಿದ್ದರೆ ನಾವು ಅರ್ಥ ಮಾಡಿಕೊಳ್ಳುತ್ತಿದ್ದೆವು. ಪಕ್ಷವೊಂದರ ಯಾವ ಮೂಲಭೂತ ಹಕ್ಕು ಉಲ್ಲಂಘಿಲ್ಪಟ್ಟಿದೆ? ಬಾಧಿತ ವ್ಯಕ್ತಿಗಳು ಯಾರೂ ಇಲ್ಲವೇ ಎಂದೂ ಪೀಠವು ಪ್ರಶ್ನಿಸಿತು.
ಬೀದಿಬದಿ ಮಾರಾಟಗಾರರ ಒಕ್ಕೂಟವೂ ವಾದಿಯಾಗಿದೆ ಎಂದು ಸುರೇಂದ್ರನಾಥ ತಿಳಿಸಿದಾಗ,ಬೀದಿಬದಿ ಮಾರಾಟಗಾರರು ನಿಯಮಗಳನ್ನು ಉಲ್ಲಂಘಿಸಿದ್ದರೆ ಅವರನ್ನು ತೆರವುಗೊಳಿಸಬಹುದು ಎಂದು ನ್ಯಾಯಾಲಯವು ಹೇಳಿತು.

‘ಬೀದಿಬದಿ ಮಾರಾಟಗಾರರು ರಸ್ತೆಗಳಲ್ಲಿ ಮಾರಾಟ ಮಾಡುವ ವ್ಯಕ್ತಿಗಳಾಗಿದ್ದಾರೆ. ಜಹಾಂಗೀರ್ಪುರಿಯಲ್ಲಿ ಕಟ್ಟಡಗಳನ್ನು ನೆಲಸಮಗೊಳಿಸುತ್ತಿದ್ದರಿಂದ ನಾವು ಮಧ್ಯಪ್ರವೇಶಿಸಬೇಕಾಗಿತ್ತು. ಇಲ್ಲಿ ಬೀದಿ ಬದಿ ಮಾರಾಟಗಾರರು ಹೇಗೆ ತೊಂದರೆಗೀಡಾಗಿದ್ದಾರೆ? ಅವರು ಫುಟ್ಪಾತ್ಗಳಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ. ಪ್ರದೇಶದ ನಿವಾಸಿಗಳು ಅಥವಾ ಅಂಗಡಿಕಾರರು ಬರಬೇಕು ’ಎಂದು ಪೀಠವು ಉತ್ತರಿಸಿತು.
 ಮಹಾನಗರ ಪಾಲಿಕೆಯನ್ನೂ ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು,ಪೂರ್ವಭಾವಿ ನೋಟಿಸುಗಳನ್ನು ನೀಡಿ ಮತ್ತು ಕಾನೂನಿಗೆ ಅನುಗುಣವಾಗಿ ತೆರವು ಕಾರ್ಯಾಚರಣೆ ನಡೆಸುತ್ತಿಲ್ಲವೇಕೆ ಎಂದು ಪ್ರಶ್ನಿಸಿತು.
                     ‌
ಸಿಪಿಎಮ್ಗೆ ಸುಪ್ರೀಂ ಪಾಠ

ತನ್ನ ಅರ್ಜಿಯನ್ನು ಹಿಂದೆಗೆದುಕೊಳ್ಳುವಂತೆ ಮತ್ತು ಉಚ್ಚ ನ್ಯಾಯಾಲಯಕ್ಕೆ ಹೋಗುವಂತೆ ಸಿಪಿಎಮ್ ಗೆ ತಿಳಿಸಿದ ಸರ್ವೋಚ್ಚ ನ್ಯಾಯಾಲಯವು ಸಂತ್ರಸ್ತ ವ್ಯಕ್ತಿಗಳು ಬಂದಿದ್ದರೆ ತಾನು ಮಧ್ಯಪ್ರವೇಶಿಸುತ್ತಿದ್ದೆ ಎಂದು ಹೇಳಿತು. ಕನಿಷ್ಠ ಎರಡು ದಿನಗಳಿಗಾಗಿ ತಡೆಯಾಜ್ಞೆ ನೀಡಿ ಎಂದು ಸಿಪಿಎಂ ಆಗ್ರಹಿಸಿದಾಗ,‘ನಿಮ್ಮ ಇಚ್ಛೆಯಂತೆ ನಾವು ಕ್ರಮವನ್ನು ಕೈಗೊಳ್ಳುವುದಿಲ್ಲ ’ ಎಂದು ಸರ್ವೋಚ್ಚ ನ್ಯಾಯಾಲಯವು ಕುಟುಕಿತು.

‘ನಾವು ಜೀವನೋಪಾಯಗಳನ್ನು ರಕ್ಷಿಸಲು ಇದ್ದೇವೆ,ಆದರೆ ಈ ರೀತಿಯಲ್ಲಲ್ಲ ’ ಎಂದು ಹೇಳಿದ ಪೀಠವು,‘ಅರ್ಜಿಯನ್ನು ಹಿಂದೆಗೆದುಕೊಳ್ಳಿ,ಇಲ್ಲದಿದ್ದರೆ ನಾವು ಅದನ್ನು ವಜಾ ಮಾಡುತ್ತೇವೆ ’ ಎಂದು ಕಟುವಾಗಿ ಹೇಳಿತು.

‘ನೀವು ಉಚ್ಚ ನ್ಯಾಯಾಲಯಕ್ಕೆ ಸಹ ಹೋಗುವುದಿಲ್ಲ. ನೀವು ನೇರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಬರುತ್ತೀರಿ. ಏನಿದು? ರಾಜಕೀಯ ಪಕ್ಷವೊಂದು ಇಲ್ಲಿಗೆ ಬಂದು ನಾವೇನು ಮಾಡಬೇಕು ಎಂದು ನಮಗೆ ಹೇಳುವುದಕ್ಕೆ ಏನು ಅರ್ಥ ’ಎಂದು ಪೀಠವು ಪ್ರಶ್ನಿಸಿತು.
                  
ಶಾಹೀನ್‌ಬಾಗ್‌ ನಲ್ಲಿ ನಡೆದಿದ್ದೇನು?

ಬೆಳಿಗ್ಗೆ ಭಾರೀ ಸಂಖ್ಯೆಯ ಪೊಲೀಸರ ಉಪಸ್ಥಿತಿಯಲ್ಲಿ ಶಾಹೀನ್ಬಾಗ್ನಲ್ಲಿ ತೆರವು ಕಾರ್ಯಾಚರಣೆ ಆರಂಭಗೊಂಡಾಗ ಪ್ರತಿಭಟಿಸಲು ನೂರಾರು ಸ್ಥಳೀಯ ನಿವಾಸಿಗಳು ಜಮಾಯಿಸಿದ್ದರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬುಲ್ಡೋಝರ್‌ಗಳ ಮುಂದೆ ಕುಳಿತುಕೊಂಡಿದ್ದರು. ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸುವುದಾಗಿ ವ್ಯಾಪಾರಿಗಳು ಮತ್ತು ಆಪ್ ಶಾಸಕ ಅಮಾನುಲ್ಲಾ ಖಾನ್ ಭರವಸೆ ನೀಡಿದ ಬಳಿಕ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News