ದೇಶದ್ರೋಹ ಕಾನೂನಿನ ನಿಬಂಧನೆಗಳ ಮರುಪರಿಶೀಲನೆ: ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರದ ಹೇಳಿಕೆ

Update: 2022-05-09 15:01 GMT

ಹೊಸದಿಲ್ಲಿ,ಮೇ 9: ಎರಡು ದಿನಗಳ ಹಿಂದಷ್ಟೇ ವಸಾಹತುಶಾಹಿ ಯುಗದ ದೇಶದ್ರೋಹ ಕಾನೂನನ್ನು ಸಮರ್ಥಿಸಿಕೊಂಡು ಅದನ್ನು ಪ್ರಶ್ನಿಸಿರುವ ಅರ್ಜಿಗಳನ್ನು ವಜಾಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೇಳಿಕೊಂಡಿದ್ದ ಕೇಂದ್ರವು ಇದೀಗ ತನ್ನ ನಿಲುವನ್ನು ಬದಲಿಸಿದೆ. ಕಾನೂನಿನ ನಿಬಂಧನೆಗಳನ್ನು ಮರುಪರಿಶೀಲಿಸಲು ತಾನು ನಿರ್ಧರಿಸಿರುವುದಾಗಿ ಅದು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ನೂತನ ಅಫಿಡವಿಟ್ನಲ್ಲಿ ಕೇಂದ್ರವು,‘ಆಝಾದಿ ಕಾ ಅಮೃತ ಮಹೋತ್ಸವ್ನ ಆಶಯ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಅನುಗುಣವಾಗಿ ಕಲಂ 124 ಎ,ದೇಶದ್ರೋಹ ಕಾನೂನಿನ ನಿಬಂಧನೆಗಳನ್ನು ಪುನರ್ಪರಿಶೀಲಿಸಲು ಭಾರತ ಸರಕಾರವು ನಿರ್ಧರಿಸಿದೆ ’ಎಂದು ತಿಳಿಸಿದೆ.

‘ಸಕ್ಷಮ ವೇದಿಕೆ’ಯಿಂದ ಪುನರ್ಪರಿಶೀಲನೆಗಾಗಿ ಕಾಯುವಂತೆ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ,ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮತ್ತು ಇತರರು ಸಲ್ಲಿಸಿರುವ ಅರ್ಜಿಗಳ ಮೇಲೆ ಸಮಯವನ್ನು ವ್ಯರ್ಥಗೊಳಿಸದಂತೆ ಸವೋಚ್ಚ ನ್ಯಾಯಾಲಯವನ್ನು ಸರಕಾರವು ಆಗ್ರಹಿಸಿದೆ.
ದೇಶದ್ರೋಹ ಕಾನೂನಿನ ವ್ಯಾಪಕ ದುರ್ಬಳಕೆಯ ಬಗ್ಗೆ ಕಳೆದ ವರ್ಷದ ಜುಲೈನಲ್ಲಿ ಕಳವಳ ವ್ಯಕ್ತಪಡಿಸಿದ್ದ ಸರ್ವೋಚ್ಚ ನ್ಯಾಯಾಲಯವು, ಮಹಾತ್ಮಾ ಗಾಂಧಿಯವರಂತಹ ಸ್ವಾತಂತ್ರ ಹೋರಾಟಗಾರರ ಧ್ವನಿಯನ್ನಡಗಿಸಲು ಬ್ರಿಟಿಷ್ ಸರಕಾರವು ಬಳಸಿದ್ದ ಈ ಕಾನೂನನ್ನೇಕೆ ರದ್ದುಗೊಳಿಸುತ್ತಿಲ್ಲ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿತ್ತು.

ಶನಿವಾರ ದೇಶದ್ರೋಹ ಕಾನೂನು ಮತ್ತು ಅದರ ಸಿಂಧುತ್ವವನ್ನು ಎತ್ತಿಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯದ 1962ರ ತೀರ್ಪನ್ನು ಸಮರ್ಥಿಸಿಕೊಂಡಿದ್ದ ಕೇಂದ್ರವು,ಆರು ದಶಕಗಳ ಕಾಲ ಅದು ‘ಸಮಯದ ಪರೀಕ್ಷೆ’ಯನ್ನು ಯಶಸ್ವಿಯಾಗಿ ಎದುರಿಸಿದೆ ಮತ್ತು ಅದರ ದುರುಪಯೋಗದ ನಿದರ್ಶನಗಳು ಕಾನೂನಿನ ಪುನರ್ಪರಿಶೀಲನೆಯನ್ನು ಎಂದಿಗೂ ಸಮರ್ಥಿಸುವುದಿಲ್ಲ ಎಂದು ವಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News