ಲಖಿಂಪುರ ಖೇರಿ ಪ್ರಕರಣ: ಆಶಿಷ್ ಮಿಶ್ರಾ ಜಾಮೀನು ಅರ್ಜಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್
Update: 2022-05-09 21:56 IST
ಲಕ್ನೋ, ಮೇ 9: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಪ್ರಧಾನ ಆರೋಪಿ ಆಶಿಷ್ ಮಿಶ್ರಾ ಅವರ ಜಾಮೀನು ಅರ್ಜಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠ ತಿರಸ್ಕರಿಸಿದೆ.
ಈ ವರ್ಷ ಫೆಬ್ರವರಿಯಲ್ಲಿ ಆಶಿಷ್ ಮಿಶ್ರಾಗೆ ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಅನಂತರ ಜಾಮೀನು ನೀಡುವಂತೆ ಕೋರಿ ಆಶಿಷ್ ಮಿಶ್ರಾ ಸಲ್ಲಿಸಿದ್ದ ಹೊಸ ಅರ್ಜಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠ ವಿಚಾರಣೆ ನಡೆಸಿತು.
ಆಶಿಷ್ ಮಿಶ್ರಾ ಅವರ ಹೊಸ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠದ ನ್ಯಾಯಮೂರ್ತಿ ಕೃಷ್ಣ ಪಹಾಲ್, ಆಶಿಷ್ ಮಿಶ್ರಾಗೆ ಜಾಮೀನು ನೀಡಿಲ್ಲ. ಅಲ್ಲದೆ, ಅರ್ಜಿಯ ಕುರಿತ ತನ್ನ ಅಭಿಪ್ರಾಯವನ್ನು ಮೇ 25ರ ಒಳಗೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿತು.