ಹನುಮಾನ್ ಚಾಲೀಸ್ ವಿವಾದ: ರಾಣಾ ದಂಪತಿಯ ಜಾಮೀನು ತಿರಸ್ಕರಿಸುವಂತೆ ಕೋರಿ ಮುಂಬೈ ಪೊಲೀಸರಿಂದ ಮನವಿ

Update: 2022-05-09 16:27 GMT

ಮುಂಬೈ, ಮೇ 9: ಹನುಮಾನ್ ಚಾಲೀಸ್ ಪಠಿಸಿದ ವಿವಾದದ ಹಿನ್ನೆಲೆಯಲ್ಲಿ ದಾಖಲಿಸಲಾದ ದೇಶದ್ರೋಹದ ಪ್ರಕರಣದ ಆರೋಪಿಗಳಾದ ಪಕ್ಷೇತರ ಸಂಸದೆ ನವನೀತ್ ರಾಣಾ ಹಾಗೂ ಅವರ ಪತಿ, ಶಾಸಕ ರವಿ ರಾಣಾ ಅವರಿಗೆ ನೀಡಿದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಮುಂಬೈ ಪೊಲೀಸರು ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಸೋಮವಾರ ಮನವಿ ಸಲ್ಲಿಸಿದ್ದಾರೆ. ಕಳೆದ ವಾರ ಜಾಮೀನು ನೀಡುವ ಸಂದರ್ಭ ವಿಶೇಷ ನ್ಯಾಯಾಲಯ ಹೇರಿದ್ದ ಷರತ್ತುಗಳಲ್ಲಿ ಒಂದನ್ನು ಉಲ್ಲಂಘಿಸಿದ ಆರೋಪದ ಆಧಾರದಲ್ಲಿ ದಂಪತಿಯ ಜಾಮೀನು ಅರ್ಜಿಯನ್ನು ರದ್ದುಗೊಳಿಸುವಂತೆ ಪೊಲೀಸರು ಕೋರಿದ್ದಾರೆ.

ಇಲ್ಲಿನ ಬಾಂದ್ರಾ ಪ್ರದೇಶದಲ್ಲಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ ‘ಮಾತೋಶ್ರೀ’ಯ ಹೊರಗೆ ಹನುಮಾನ್ ಚಾಲೀಸ್ ಪಠಿಸಲಾಗುವುದು ಎಂದು ಘೋಷಿಸಿದ ಬಳಿಕ ಮುಂಬೈ ಪೊಲೀಸರು ಮಹಾರಾಷ್ಟ್ರದ ಅಮರಾವತಿಯ ಲೋಕಸಭಾ ಸದಸ್ಯ ನವನೀತ್ ರಾಣಾ ಹಾಗೂ ಅವರ ಪತಿ, ಅಮರಾವತಿಯ ಬಡ್ನೇರಾದ ಶಾಸಕ ರವಿ ರಾಣಾ ಅವರನ್ನು ಎಪ್ರಿಲ್ 23ರಂದು ಬಂಧಿಸಿದ್ದರು. ಅವರ ವಿರುದ್ಧ ದೇಶದ್ರೋಹ ಹಾಗೂ ಎರಡು ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿದ ಆರೋಪದಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ವಿಶೇಷ ನ್ಯಾಯಾಲಯ ಮೇ 4ರಂದು ಈ ದಂಪತಿಗೆ ಜಾಮೀನು ನೀಡಿತ್ತು.

ಅಲ್ಲದೆ, ಇದೇ ರೀತಿಯ ಅಪರಾಧದಲ್ಲಿ ತೊಡಗಬಾರದು ಹಾಗೂ ಮಾಧ್ಯಮದೊಂದಿಗೆ ಮಾತನಾಡಬಾರದು ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಿತ್ತು. ಮಾಧ್ಯಮದೊಂದಿಗೆ ಮಾತನಾಡಬಾರದು ಎಂಬ ಷರತ್ತನ್ನು ಉಲ್ಲಂಘಿಸಿದ್ದಾರೆ ಎಂದು ಹೇಳುತ್ತಿರುವುದರಿಂದ ದಂಪತಿಯ ಜಾಮೀನು ರದ್ದುಗೊಳಿಸುವಂತೆ ಕೋರಿ ಉಪನಗರ ಖಾರ್ ಪೊಲೀಸರು ವಿಶೇಷ ಸರಕಾರಿ ಅಭಿಯೋಜಕ ಪ್ರದೀಪ್ ಘರಟ್ ಅವರ ಮೂಲಕ ಸೋಮವಾರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News