ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತ
ಹೊಸದಿಲ್ಲಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಸರ್ವಕಾಲಿಕ ಕುಸಿತ ಕಂಡಿದ್ದು, ಪ್ರತಿ ಡಾಲರ್‍ಗೆ 77.44 ರೂ. ಮಟ್ಟ ತಲುಪಿದೆ. ಈ ಹಿಂದಿನ ಅತ್ಯಂತ ಕನಿಷ್ಠ ಮೌಲ್ಯ ಎಂದರೆ 77.05 ಆಗಿತ್ತು.
ಅಮೆರಿಕದ ಡಾಲರ್ ಎದುರು 76.90 ಆಗಿದ್ದ ರೂಪಾಯಿ ಮೌಲ್ಯ ಸೋಮವಾರ 54 ಪೈಸೆಯಷ್ಟು ಕುಸಿದು ಇದುವರೆಗಿನ ಕನಿಷ್ಠ ಅಂದರೆ 77.44ಕ್ಕೆ ಇಳಿದಿದೆ ಎಂದು ಪಿಟಿಐ ವರದಿ ಮಾಡಿದೆ.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 77.17ರಿಂದ ವಹಿವಾಟು ಆರಂಭಿಸಿದ್ದು, ವಹಿವಾಟಿನ ಅವಧಿಯಲ್ಲಿ ಇದುವರೆಗಿನ ಕನಿಷ್ಠ ಮಟ್ಟವಾದ 77.52ನ್ನು ತಲುಪಿತು. ಹಣದುಬ್ಬರದ ಕಾರಣದಿಂದ ಜಾಗತಿಕವಾಗಿ ಕೇಂದ್ರೀಯ ಬ್ಯಾಂಕ್‍ಗಳು ದರವನ್ನು ಹೆಚ್ಚಿಸುವ ಸಾಧ್ಯತೆ ಬಗ್ಗೆ ಆತಂಕ ಹೆಚ್ಚಿದ ಹಿನ್ನೆಲೆಯಲ್ಲಿ ಅಪಾಯ ಸಾಧ್ಯತೆಯ ತೀವ್ರತೆ ಕುಸಿದಿದೆ ಎನ್ನುವುದು ವಿದೇಶಿ ವಿನಿಮಯ ವಹಿವಾಟುದಾರರ ವಿಶ್ಲೇಷಣೆ.
ಹೆಚ್ಚುತ್ತಿರುವ ಹಣದುಬ್ಬರ, ಅಧಿಕ ಬಡ್ಡಿದರ ಮತ್ತು ಆರ್ಥಿಕ ಪ್ರಗತಿ ನಿಧಾನದ ಸಾಧ್ಯತೆ ಬಗೆಗಿನ ಅತಂಕದಿಂದ ಡಾಲರ್ ಮೌಲ್ಯ ಏರಿಕೆಯಾಗುತ್ತಿದೆ. ಡಾಲರ್ ಎರಡು ದಶಕದಲ್ಲೇ ಅತ್ಯಧಿಕ ಮಟ್ಟವನ್ನು ತಲುಪಿದ್ದು, ಅಧಿಕ ಖಜಾನೆ ಪ್ರತಿಫಲ ಹಾಗೂ ಹೆಚ್ಚುತ್ತಿರುವ ಹಣದುಬ್ಬರ ಇದಕ್ಕೆ ಕಾರಣ. ಅಮೆರಿಕದ ಫೆಡರಲ್ ರಿಸರ್ವ್‍ನಿಂದ ತೀವ್ರ ದರ ಹೆಚ್ಚಳದ ನಿರೀಕ್ಷೆ ಕೂಡಾ ಡಾಲರ್‍ಗೆ ವರದಾನವಾಗಿದೆ.
ಇದರ ಜತೆಗೆ ಚೀನಾದಲ್ಲಿ ಲಾಕ್‍ಡೌನ್ ಬಿಗಿಗೊಳಿಸಿರುವುದು, ರಷ್ಯಾದಿಂದ ತೈಲ ಆಮದು ಸ್ಥಗಿತಗೊಳಿಸಲು ಯೂರೋಪ್ ಚಿಂತನೆ ನಡೆಸಿರುವುದು, ಆರ್ಥಿಕ ಪ್ರಗತಿ ನಿಧಾನವಾಗುವ ಸಾಧ್ಯತೆಗಳು, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಕೂಡಾ ಇದಕ್ಕೆ ಪೂರಕವಾಗಿದೆ.