ಹಿಮಾಚಲ ಪ್ರದೇಶ: ಬಿಜೆಪಿಯ ಮೆಗಾ ಕಾರ್ಯಕ್ರಮದಲ್ಲಿ ರಾಹುಲ್ ದ್ರಾವಿಡ್ ಭಾಗಿಯಾಗಲಿದ್ದಾರೆಂದ ಶಾಸಕ ನೆಹ್ರಿಯಾ

Update: 2022-05-10 06:16 GMT

ಶಿಮ್ಲಾ: ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮೇ 12 ರಿಂದ ಮೇ 15 ರವರೆಗೆ ಧರ್ಮಶಾಲಾದಲ್ಲಿ ನಡೆಯಲಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಧರ್ಮಶಾಲಾ ಶಾಸಕ ವಿಶಾಲ್ ನೆಹ್ರಿಯಾ ಸೋಮವಾರ ಹೇಳಿದ್ದಾರೆ.

ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಬಿಜೆಪಿ ಶಾಸಕ ನೆಹ್ರಿಯಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಪಕ್ಷದ ಇತರ ಪದಾಧಿಕಾರಿಗಳು ಹಾಗೂ  ಕೇಂದ್ರ ಸಚಿವರು ಈ ಕಾರ್ಯಕ್ರಮದಲ್ಲಿ  ಉಪಸ್ಥಿತರಿರುತ್ತಾರೆ ಎಂದು ಹೇಳಿದರು.

ಮೂರು ದಿನಗಳ ಅಧಿವೇಶನದಲ್ಲಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಕೂಡ ಭಾಗವಹಿಸಲಿದ್ದಾರೆ. ದೇಶದಾದ್ಯಂತ 139 ಪ್ರತಿನಿಧಿಗಳು ಅಧಿವೇಶನದಲ್ಲಿ ತಮ್ಮ ಉಪಸ್ಥಿತಿಯನ್ನು ನೋಂದಾಯಿಸಲಿದ್ದಾರೆ.

"ಮೇ 12ರಿಂದ 15ರವರೆಗೆ ಧರ್ಮಶಾಲಾದಲ್ಲಿ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದೆ. ಬಿಜೆಪಿಯ ರಾಷ್ಟ್ರೀಯ ನಾಯಕತ್ವ ಹಾಗೂ  ಹಿಮಾಚಲ ಪ್ರದೇಶದ ನಾಯಕತ್ವ ಭಾಗಿಯಾಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನೆ ಸಚಿವರು, ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ’’ ಎಂದು ನೆಹ್ರಿಯಾ ಹೇಳಿದರು.

ಭಾರತದ ಮಾಜಿ ಕ್ರಿಕೆಟ್ ನಾಯಕ ಮತ್ತು ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಉಪಸ್ಥಿತಿಯು ಯುವಜನರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಂದೇಶವನ್ನು ನೀಡುತ್ತದೆ ಎಂದು  ನೆಹ್ರಿಯಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News