ಗುಜರಾತ್‌ನಲ್ಲಿ ರಾಹುಲ್ ಗಾಂಧಿ: ಅತೃಪ್ತ ನಾಯಕ ಹಾರ್ದಿಕ್ ಪಟೇಲ್ ಭೇಟಿ ಸಾಧ್ಯತೆ
ಅಹಮದಾಬಾದ್: ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ಚುನಾವಣೆಗೆ ತಯಾರಿ ನಡೆಸಲು ಗುಜರಾತ್‌ನಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ಅತೃಪ್ತ ನಾಯಕ ಹಾರ್ದಿಕ್ ಪಟೇಲ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಪ್ರಬಲ ಪಾಟಿದಾರ್ ಸಮುದಾಯದ ನಾಯಕ ಹಾಗೂ ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಅವರು ತಮ್ಮ ಪಕ್ಷದ ನಾಯಕತ್ವಕ್ಕೆ ಇತ್ತೀಚೆಗಿನ ದಿನಗಳಲ್ಲಿ ಕಳವಳಕಾರಿ ಸಂಕೇತಗಳನ್ನು ಕಳುಹಿಸುತ್ತಿದ್ದಾರೆ. ಇತ್ತೀಚೆಗೆ ಅವರು ಆಡಳಿತಾರೂಢ ಬಿಜೆಪಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಊಹಾಪೋಹಗಳ ಮಧ್ಯೆ ಅವರು ತಮ್ಮ ಟ್ವಿಟರ್ ಬಯೋದಿಂದ "ಕಾಂಗ್ರೆಸ್" ಹಾಗೂ ಪಕ್ಷದ ಚಿಹ್ನೆಯನ್ನು ತೆಗೆದುಹಾಕಿದ್ದರು.
2019 ರಲ್ಲಿ ಕಾಂಗ್ರೆಸ್‌ಗೆ ಸೇರಿದ 28 ವರ್ಷ ವಯಸ್ಸಿನ ಪಟೇಲ್ ಅವರು ಗುಜರಾತ್‌ನಲ್ಲಿ ಕಾಂಗ್ರೆಸ್ ಮತ್ತು ಅದರ ಉನ್ನತ ನಾಯಕರು ತನ್ನನ್ನು "ನಿರ್ಲಕ್ಷಿಸಿದ್ದಾರೆ" ಎಂದು ದೂರಿದ್ದಾರೆ.
ರಾಹುಲ್ ಗಾಂಧಿ ಅವರು ಅತೃಪ್ತ ನಾಯಕ ಹಾರ್ದಿಕ್ ಪಟೇಲ್ ಅವರನ್ನು ಸಂಪರ್ಕಿಸಿದ್ದು, ಪಕ್ಷದಲ್ಲಿ ಮುಂದುವರಿಯುವಂತೆ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಆದಿವಾಸಿ ಸತ್ಯಾಗ್ರಹ ರ್ಯಾಲಿ ಸೇರಿದಂತೆ ಚುನಾವಣಾ ಪೂರ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ಅವರು ದಾಹೋದ್‌ನಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರು ಬುಡಕಟ್ಟು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಗುಜರಾತ್‌ನಲ್ಲಿ ಬುಡಕಟ್ಟು ಜನರು ಕಾಂಗ್ರೆಸ್‌ಗೆ ಒಲವು ತೋರುತ್ತಿದ್ದಾರೆ. ಆದರೆ ಈ ತಿಂಗಳ ಆರಂಭದಲ್ಲಿ ಎಎಪಿ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಬುಡಕಟ್ಟು ಜನರನ್ನು ಉದ್ದೇಶಿಸಿ ಮಾತನಾಡಿದ್ದರು.