×
Ad

ಯತ್ನಾಳ್ ಹೇಳಿಕೆ; ಕ್ರಮಕ್ಕೆ ಕೇಂದ್ರ ಶಿಸ್ತು ಸಮಿತಿಗೆ ವರದಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್

Update: 2022-05-10 12:30 IST

ಉಡುಪಿ : ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ಕೇಂದ್ರದ ಶಿಸ್ತು ಸಮಿತಿಗೆ ಕಳುಹಿಸಿಕೊಟ್ಟಿದ್ದೇವೆ. ಒಬ್ಬರು ಪಕ್ಷದ ಬಿಫಾರ್ಮ್ ತೆಗೆದುಕೊಂಡು ಶಾಸಕರಾದ ಬಳಿಕ ಅವರಿಗೆ ಕೇಂದ್ರದ ಶಿಸ್ತು ಸಮಿತಿಯೇ ನೋಟೀಸ್ ನೀಡುತ್ತದೆ. ಹಾಗಾಗಿ ನಾವು ಎಲ್ಲವನ್ನು ಸಮಿತಿಗೆ ಕಳುಹಿಸಿಕೊಟ್ಟಿದ್ದೇವೆ. ಅವರು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಮಣಿಪಾಲದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಚುನಾವಣೆಗಾಗಿ ಪಕ್ಷದಿಂದ ಪೂರ್ಣ ತಯಾರಿ ಆರಂಭ ವಾಗಿದೆ.  ರಾಜ್ಯದಲ್ಲಿ ನಾವು 150ಕ್ಕೂ ಅಧಿಕ ಸ್ಥಾನ ಗೆಲ್ಲುವುದು ಖಚಿತ. ಅದಕ್ಕೆ ಬೇಕಾದ ಕಾರ್ಯ ಯೋಜನೆ ಮಾಡುತ್ತಿದ್ದೇವೆ ಎಂದರು.

ಬೆಲೆ ಏರಿಕೆ ಸಹಜ

ದೇಶದಲ್ಲಿ ಬೇರೆ ಬೇರೆ ವ್ಯವಸ್ಥೆಯಡಿ ಬೆಲೆ ಏರಿಕೆ ಆಗುತ್ತಿರುವುದು ಸಹಜ. ನಮ್ಮ ಸರಕಾರ ಬಂದಾಗ ಹಿಂದಿನಂತೆ ಇಲ್ಲ. ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಬೆಲೆ ಏರಿಕೆಯಾದಾಗ ಏರುತ್ತದೆ, ಕಡಿಮೆಯಾದಾಗ ಇಳಿಕೆ ಆಗುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದರು.

75 ವರ್ಷಗಳ ಅವಧಿಯಲ್ಲಿ ಉಚಿತವಾಗಿ ಗ್ಯಾಸ್ ನೀಡಿರುವುದು, ಅರ್ಜಿ ಹಾಕದಿದ್ದರೂ ಮನೆ ಬಾಗಿಲಿಗೆ ಗ್ಯಾಸ್, ಖಾತೆಗೆ ನೇರವಾಗಿ 500ರೂ. ಮತ್ತು ರೈತರ ಖಾತೆಗೆ ಪ್ರತಿವರ್ಷ 10 ಸಾವಿರ ಹಾಕುತ್ತಿರುವುದು ಬಿಜೆಪಿ ಸರಕಾರ ಮಾತ್ರ. ಬೆಲೆ ಏರಿಕೆಯಾದರೂ ಅದನ್ನು ನಿಯಂತ್ರಿಸಲು ಪೂರಕವಾಗಿ ಬಿಪಿಎಲ್ ಕಾರ್ಡ್‌ದಾರರಾಗಿ ಆಯುಷ್‌ ಮಾನ್ ಕಾರ್ಡ್ ನೀಡಿದೆ. ಈ ರೀತಿ ಪೂರ್ಣ ವಾದ ಸಹಕಾರವನ್ನು ನಮ್ಮ ಸರಕಾರ ನೀಡುತ್ತಿದೆ ಎಂದರು.

ಚುನಾವಣೆ ಬಂದಾಗ ಏಕಾಏಕಿ ತೈಲ ಬೆಲೆ ಇಳಿಕೆ ಆಗುತ್ತದೆ, ಚುನಾವಣೆ ಮುಗಿದ ಕೂಡಲೇ ಬೆಲೆ ಏರಿಕೆ ಆಗುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಳಿನ್, ತೈಲ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಂಬಂಧಿಸಿದ್ದಾಗಿದೆ. ಅಲ್ಲಿ ವ್ಯಾತ್ಯಾಸ ಆದಾಗ ದೇಶದಲ್ಲಿ ಸಹಜವಾಗಿ ವ್ಯಾತ್ಯಾಸ ಗಳು ಆಗುತ್ತವೆ ಎಂದು ತಿಳಿಸಿದರು.

ಇನ್ನಷ್ಟು ಜನ ಪಕ್ಷಕ್ಕೆ ಸೇರ್ಪಡೆ

ಪಕ್ಷಕ್ಕೆ ಸೇರ್ಪಡೆಗೊಳ್ಳಲು ತುಂಬಾ ಜನ ಇದ್ದಾರೆ. ನಮ್ಮ ಜೊತೆ ಈ ಕುರಿತು ಮಾತುಕತೆಗಳು ಆಗುತ್ತಿವೆ. ತಾಂತ್ರಿಕ ಕಾರಣ, ಬೇರೆ ಬೇರೆ ಸಮಸ್ಯೆಗಳು ಹಾಗೂ ಕಾರ್ಯಕರ್ತರ ಆಪೇಕ್ಷೆಗಳನ್ನು ನೋಡಿಕೊಂಡು ಮುಂದಕ್ಕೆ ಯೋಚನೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಒಟ್ಟು 30 ವರ್ಷಗಳ ಕಾಲ ಮೋದಿಯೇ ಪ್ರಧಾನಿ ಎಂಬ ಅಮಿತ್ ಶಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, 30 ವರ್ಷ ಬೇರೆ ಯಾವುದೇ ಸರಕಾರ ಬರುವುದಿಲ್ಲ. ಮೋದಿ ಸರಕಾರವೇ ಇರುತ್ತದೆ. ಮುಂದೆಯೂ ಮೋದಿಯೇ ಪ್ರಧಾನಿ ಆಗಿ ಇರುತ್ತಾರೆ ಎಂದರು.

ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಈಗಾಗಲೇ ಕೇಂದ್ರಕ್ಕೆ ನಿರ್ದೇಶನವನ್ನು ನೀಡಿದೆ. ಅದರ ಪ್ರಕಾರ ಸರಕಾರ ಗಟ್ಟಿಯಾದ ತೀರ್ಮಾನ ತೆಗೆದುಕೊಳ್ಳಲಿದೆ. ಈ ದೇಶದಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬರಿಗೂ ದೇಶ ಮುಖ್ಯವಾಗಿರುತ್ತದೆ. ರಾಷ್ಟ್ರವನ್ನು ಪ್ರೀತಿಸುವ ಕೆಲಸ ಮಾಡಬೇಕು. ಈ ಸಂಬಂಧ ಬಲವಾದ ಕಾನೂನು ಮಾಡುವ ಬಗ್ಗೆ ಕೇಂದ್ರ ಸರಕಾರ ಪರಿಶೀಲನೆ ಮಾಡುತ್ತದೆ ಎಂದು ನಳಿನ್ ಕುಮಾರ್ ತಿಳಿಸಿದರು.

‘ಮುತಾಲಿಕ್ ಮತ್ತು ನಮ್ಮ ವಿಚಾರಧಾರೆ ಒಂದೇ’

ಹೋರಾಟಗಾರರ ವಿಚಾರವೇ ಬೇರೆ, ಸಂವಿಧಾನಿಕವಾಗಿ ಆಡಳಿತ ನಡೆಸುವ ಸರಕಾರದ ಜವಾಬ್ದಾರಿಯೇ ಬೇರೆ ಆಗಿರುತ್ತದೆ. ಆದರೆ ಮುತಾಲಿಕ್ ಮತ್ತು ನಮ್ಮ ವಿಚಾರಧಾರೆ ಒಂದೇ ಆಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ನಾವು ಸಂಘಟನೆ ಮೂಲಕ ಹಲವು ವಿಚಾರಗಳನ್ನು ಹೇಳಿದರೆ ಎಲ್ಲವನ್ನು ಸರಕಾರಕ್ಕೆ ಮಾಡಲು ಆಗುವುದಿಲ್ಲ. ಮುತಾಲಿಕ್ ಸಹಜವಾದ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಸಂವಿಧಾನದ ಅಡಿಯಲ್ಲಿ ಮುತಾಲಿಕ್ ಅವರ ಯಾವುದೆಲ್ಲ ಆಪೇಕ್ಷೆಗಳನ್ನು ಪೂರೈಸಲು ಆಗುತ್ತದೆಯೋ ಅವುಗಳನ್ನು ಸರಕಾರ ಪೂರೈಸುತ್ತದೆ ಎಂದರು.

ಆಝಾನ್‌ಗೆ ಸಂಬಂಧಿಸಿ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ನ್ಯಾಯಾಲಯದ ತೀರ್ಪಿನಂತೆ ನಮ್ಮ ಸರಕಾರ ತೀರ್ಮಾನ ತೆಗೆದು ಕೊಳ್ಳಲಿದೆ. ಮಸೀದಿಯ ಮೈಕ್ ತೆಗೆಸಲು ಕಾನೂನು ಸಂವಿಧಾನದ ಅಡೆತಡೆಗಳು ಇವೆ. ಅವುಗಳನ್ನು ನೋಡಿಕೊಂಡು ರಾಜ್ಯ ಸರಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ನಳಿನ್‌ ಕುಮಾರ್ ಕಟೀಲ್‌ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News