×
Ad

ಸಂತೂರ್ ಮಾಂತ್ರಿಕ ಶಿವಕುಮಾರ್ ಇನ್ನಿಲ್ಲ

Update: 2022-05-10 14:06 IST
Shiv Kumar Sharma (Photo: Twitter/@AdityaRajKaul)

ಮಂಬೈ,ಮೇ 10: ಹಿರಿಯ ಸಂತೂರ್ ವಾದಕ ಹಾಗೂ ಸಂಗೀತ ನಿರ್ದೇಶಕ ಪಂಡಿತ್ ಶಿವಕುಮಾರ್ ಶರ್ಮಾ ಅವರು ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರೆಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

   ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲೊಬ್ಬರಾದ ಶಿವಕುಮಾರ್ ಶರ್ಮಾ, ಮುಂದಿನ ವಾರ ಭೋಪಾಲ್ ನಲ್ಲಿ ಕಾರ್ಯಕ್ರಮವನ್ನು ನೀಡುವವರಿದ್ದರು. ಅವರು ಮೂತ್ರಕೋಶದ ತೊಂದರೆಯಿಂದ ಬಳಲುತ್ತಿದ್ದರು.

ಪದ್ಮಭೂಷಣ ಪುರಸ್ಕೃತರಾದ ಶರ್ಮಾ ಅವರು 1938ರಲ್ಲಿ ಜಮ್ಮುವಿನಲ್ಲಿ ಜನಿಸಿದ್ದರು. ಮೂಲತಃ ಜಮ್ಮುಕಾಶ್ಮೀರದ ಜಾನಪದ ವಾದನವಾದ ಸಂತೂರ್ ನಲ್ಲಿ ಶಾಸ್ತ್ರೀಯ ಸಂಗೀತ ನುಡಿಸಿದ ಪ್ರಪ್ರಥಮ ಸಂಗೀತಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ .
 
ಖ್ಯಾತ ಕೊಳಲು ವಾದಕ ಹರಿಪ್ರಸಾದ್ ಚೌರಾಸಿಯಾ ಜೊತೆಗೂಡಿ ಶಿವಕುಮಾರಂ ಶರ್ಮಾ ಅವರು ಹಲವಾರು ಹಿಂದಿ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ್ದಾರೆ. ಶಿವ-ಹರಿ ಎಂಬ ಹೆಸರಿನಲ್ಲಿ ಪ್ರಸಿದ್ಧವಾದ ಈ ಸಂಗೀತ ನಿರ್ದೇಶಕ ಜೋಡಿ ಸಿಲ್ಸಿಲಾ, ಲಮ್ಹೆ ಹಾಗೂ ಚಾಂದನಿ ಮತ್ತಿತರ ಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ. ಶಿವಕುಮಾರ್ ಶರ್ಮಾ ಅವರ ಪುತ್ರ ರಾಹುಲ್ ಶರ್ಮಾ ಸಂತೂರ್ ವಾದಕರಾಗಿದ್ದಾರೆ.

ಶಿವಕುಮಾರ್ ಶರ್ಮಾ ನಿಧನಕ್ಕೆ ಖ್ಯಾತ ಸರೋದ್ ವಾದಕ ಅಮ್ಜದ್ ಅಲಿ ಖಾನ್ ಅವರು ಗಾಢವಾದ ಸಂತಾಪ ವ್ಯಕ್ತಪಡಿಸಿದ್ದಾರೆ. ‘‘ಶಿವಕುಮಾರ್ ಅವರು ಸಂತೂರ್ ವಾದನದ ಆದ್ಯ ಪ್ರವರ್ತಕರಾಗಿದ್ದಾರೆ ಹಾಗೂ ಅವರು ಸಂಗೀತ ಲೋಕಕ್ಕೆ ಅವರು ಸರಿಸಾಟಿಯಿಲ್ಲದಂತಹ ಕೊಡುಗೆ ನೀಡಿದ್ದಾರೆ. ಅವರ ನಿಧನವು ನನಗಾದ ವೈಯಕ್ತಿಕ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಸಂಗೀತ ಸದಾ ಜೀವಂತವಾಗಲಿ’’ ಎಂದು ಅಮ್ಜದ್ ಅಲಿ ಖಾನ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News