ದೇಶದ್ರೋಹ ಕಾನೂನಿನ ಮರುಪರಿಶೀಲನೆಯ ತನಕ ಪೌರರ ಹಕ್ಕುಗಳ ರಕ್ಷಣೆ: ಕೇಂದ್ರದಿಂದ ಉತ್ತರ ಕೇಳಿದ ಸುಪ್ರೀಂಕೋರ್ಟ್

Update: 2022-05-10 15:31 GMT

ಹೊಸದಿಲ್ಲಿ,ಮೇ 10: ವಸಾಹತುಶಾಹಿ ಕಾಲದ ದೇಶದ್ರೋಹ ಕುರಿತಾದ ಕಾನೂನಿನ ಬಗ್ಗೆ ಸೂಕ್ತವಾದ ವೇದಿಕೆಯಲ್ಲಿ ಮರುಪರಿಶೀಲಿಸುವವರೆಗೆ ದೇಶದ ಪೌರರ ಹಿತಾಸಕ್ತಿಗಳನ್ನು ರಕ್ಷಿಸುವ ಬಗ್ಗೆ ತನ್ನ ಅಭಿಪ್ರಾಯಗಳನ್ನು ತಿಳಿಸುವಂತೆ ಸುಪ್ರೀಂಕೋರ್ಟ್ ಮಂಗಳವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ದೇಶದ್ರೋಹದ ಕಾನೂನನ್ನು ಸೂಕ್ತವಾದ ವೇದಿಕೆಯಲ್ಲಿ ಮರುಪರಿಶೀಲಿಸಲು ನಿರ್ಧರಿಸಿರುವುದಾಗಿ ಕೇಂದ್ರ ಸರಕಾರವು ಸೋಮವಾರ ನೀಡಿದ ಹೇಳಿಕೆಯನ್ನು ತಾನು ಗಮನಕ್ಕೆ ತೆಗೆದುಕೊಂಡಿರುವುದಾಗಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠ ತಿಳಿಸಿತು. ಈ ಕಾನೂನು ಮರು ಪರಿಶೀಲಸಲ್ಪಡುವರೆಗೂ, ದೇಶದ್ರೋಹದ ಕುರಿತಾದ ನೂತನ ಪ್ರಕರಣಗಳನ್ನು ದಾಖಲಿಸಿಕೊಳ್ಳುವುದನ್ನು ತಟಸ್ಥಗೊಳಿಸಲಾಗುವುದೇ ಎಂದು ಅದು ಕೇಂದ್ರ ಸರಕಾರವನ್ನು ಪ್ರಶ್ನಿಸಿತು.

 ಕೇಂದ್ರ ಸರಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ವಿಷಯವಾಗಿ ತಾನು ಕೇಂದ್ರ ಸರಕಾರದಿಂದ ಸೂಚನೆಯನ್ನು ಪಡೆದುಕೊಳ್ಳುತ್ತೇನೆ ಹಾಗೂ ಬುಧವಾರ ಈ ಬಗ್ಗೆ ನ್ಯಾಯಪೀಠಕ್ಕೆ ವಿವರಣೆ ನೀಡುತ್ತೇನೆ ಎಂದರು.

    ‘‘ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ. ನಮಗೆ ಸೂಚನೆಗಳು ಬೇಕಾಗಿವೆ. ನಾಳೆಯವರೆಗೆ ನಿಮಗೆ ಕಾಲಾವಕಾಶ ನೀಡುತ್ತೇವೆ. ನಾವು ಕೇಳುತ್ತಿರುವ ನಿರ್ದಿಷ್ಟ ಪ್ರಶ್ನೆಗಳೆಂದರೆ ಮೊದಲನೆಯದಾಗಿ, ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿರುವ (ದೇಶದ್ರೋಹ) ಪ್ರಕರಣಗಳ ವಿಚಾರವೇನು ಹಾಗೂ ಭವಿಷ್ಯದಲ್ಲಿ ಇಂತಹ ಪ್ರಕರಣಗಳನ್ನು ಕೇಂದ್ರ ಸರಕಾರ ಯಾವ ರೀತಿ ನಿಭಾಯಿಸಲಿದೆ ’’ ಎಂದು ನ್ಯಾಯಾಲಯ ಪ್ರಶ್ನಿಸಿತು.

  ದೇಶದ್ರೋಹದ ಕಾನೂನಿನ ಮರು ಪರಿಶೀಲನೆಯಾಗುವ ತನಕ ಭವಿಷ್ಯದಲ್ಲಿ ಇಂತಹ ಪ್ರಕರಣಗಳನ್ನು ದಾಖಲಿಸುವುದು ತಟಸ್ಥಗೊಳಿಸಲಾಗುವುದೇ ಎಂಬ ಬಗ್ಗೆ ನ್ಯಾಯಪೀಠವು ಕೇಂದ್ರ ಸರಕಾರದಿಂದ ಉತ್ತರವನ್ನು ಕೋರಿದೆ.

ಕೇಂದ್ರ ಸರಕಾರವು ಸೋಮವಾರ ಸುಪ್ರೀಂಕೋರ್ಟ್ ಗೆ ನೀಡಿದ ಹೇಳಿಕೆಯಲ್ಲಿ ದೇಶದ್ರೋಹದ ಕಾನೂನುಗಳಲ್ಲಿನ ನಿಬಂಧನೆಗಳನ್ನು ಸಡಿಲುಗೊಳಿಸಲು ತಾನು ನಿರ್ಧರಿಸಿರುವುದಾಗಿ ತಿಳಿಸಿತ್ತು.

 ವಿವಿಧ ಸರಕಾರಗಳು ತಮ್ಮ ರಾಜಕೀಯ ಸೇಡನ್ನು ತೀರಿಸಿಕೊಳ್ಳಲು ದೇಶದ್ರೋಹದ ಕಾನನನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಹಳ ಸಮಯದಿಂದಲೇ ಚರ್ಚೆಯಾಗುತ್ತಲೇ ಬಂದಿದೆ. ವಸಾಹತುಶಾಹಿ ಆಡಳಿತವು ರೂಪಿಸಲ್ಪಟ್ಟಂತಹ ದೇಶದ್ರೋಹದ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅಹವಾಲುಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News