ಸಾವಿರ ರೂ. ಗಡಿದಾಟಿದ ಅಡುಗೆ ಅನಿಲ ಬೆಲೆ; ಉಡುಪಿಯಲ್ಲಿ ವಿನೂತನ ಪ್ರತಿಭಟನೆ
ಉಡುಪಿ : ಅಡುಗೆ ಅನಿಲ ಬೆಲೆ ಸಾವಿರ ರೂಪಾಯಿ ಗಡಿ ದಾಟಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ನೇತೃತ್ವದಲ್ಲಿ ಮಂಗಳವಾರ ಉಡುಪಿಯ ಬೀಡಿನಗುಡ್ಡೆ ಮೈದಾನದಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
‘ಸಾವಿರದ ಸಂಭ್ರಮ’ ಹೆಸರಿನಲ್ಲಿ ಮೈದಾನದಲ್ಲಿ ಒಂದು ಸಾವಿರ ಸಿಹಿ ತಿಂಡಿ ಗಳನ್ನು ಇರಿಸಿ, ವೃತ್ತಾಕಾರದಲ್ಲಿ ಬೆಂಕಿ ಹಚ್ಚಿ ಅದರ ಮಧ್ಯೆ ಗ್ಯಾಸ್ ಸಿಲಿಂಡರ್ ಇಟ್ಟು ಬಾಬಾ ವೇಷ ಧರಿಸಿದ್ದ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಪ್ರತಿಭಟಿಸಿದರು.
ಈ ಬಗ್ಗೆ ಮಾತನಾಡಿದ ನಿತ್ಯಾನಂದ ಒಳಕಾಡು, ಬೆಲೆ ಏರಿಕೆಯಿಂದ ಜನ ಸಾಮಾನ್ಯರು ದಿನ ನಿತ್ಯ ಬಳಸುವ ಅಡುಗೆ ಅನಿಲ ದರ ಸಾವಿರ ರೂ. ಗಡಿ ದಾಟಿದೆ. ಇದರ ಸಬ್ಸಿಡಿ ಕೂಡ ತೆಗೆದಿದ್ದಾರೆ. ಕಟ್ಟಿಗೆ ಕೂಡ ಸಿಗುತ್ತಿಲ್ಲ. ಸರಕಾರ ಪ್ರತಿದಿನ ಗ್ಯಾಸ್ ಹಾಗೂ ತೈಲ ಬೆಲೆಯನ್ನು ಏರಿಕೆ ಮಾಡುತ್ತಿದೆ. ಇದರಿಂದ ಜನ ಸಾಮಾನ್ಯರು ನಲುಗಿ ಹೋಗುತ್ತಿದ್ದಾರೆ ಎಂದು ಹೇಳಿದರು.
ಸರಕಾರದ ಗಮನ ಸೆಳೆಯಲು ಸಾವಿರದ ಸಂಭ್ರಮ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಬೆಲೆ ಏರಿಕೆಯಿಂದ ಸರಕಾರ ಸಂಭ್ರಮ ಪಡುತ್ತಿದ್ದರೆ, ಜನ ಸಾಮಾನ್ಯರು ಬೆಂಕಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.
ತೈಲ ಬೆಲೆ ಏರಿಕೆಯಿಂದ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಕೂಡ ಜಾಸ್ತಿ ಆಗುತ್ತಿದೆ. ಒಂದೆಡೆ ನಿರುದ್ಯೋಗ ಸಮಸ್ಯೆ, ಇನ್ನೊಂದೆಡೆ ವ್ಯಾಪಾರ ಇಲ್ಲದೆ ಜನ ಕಂಗಾಲಾಗಿದ್ದಾರೆ. ಆದುದರಿಂದ ಸರಕಾರ ಗ್ಯಾಸ್, ತೈಲ ಬೆಲೆಯನ್ನು ಇಳಿಕೆ ಮಾಡಬೇಕು. ಇದರಿಂದ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಕೂಡ ಇಳಿಕೆ ಆಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಕನಕದಾಸ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಹನುಮಂತ ಡೊಳ್ಳಿನ್, ಕುರುಬರ ಸಂಘದ ನಿರ್ದೇಶಕ ಬಸವರಾಜ ಕುರುಬರ ಮೊದಲಾದವರು ಉಪಸ್ಥಿತರಿದ್ದರು.