ಪೂಜಾರಿಗಳಿಗೆ ಆರ್ಥಿಕ ದೃಢತೆ ಒದಗಿಸದಿದ್ದರೆ ಗರಡಿಗಳು ವೈದಿಕರ ಪಾಲಾಗುವ ಅಪಾಯ: ಬಾಬು ಅಮೀನ್

Update: 2022-05-10 15:19 GMT

ಉಡುಪಿ‌ : ಗರಡಿಯ ಪೂಜಾರಿಯಿಂದ ಚಾಕರಿಯವರ ತನಕ ಎಲ್ಲರಿಗೂ ಆರ್ಥಿಕ ದೃಡತೆಯನ್ನು ಒದಗಿಸಬೇಕು. ಅದಕ್ಕೆ ಸರಕಾರದಿಂದಲೂ ವೇತನಕ್ಕೆ ಒತ್ತಾಯಿಸಬೇಕು. ಇಲ್ಲದಿದ್ದರೆ ಮುಂದಿನ ೧೫ ವರ್ಷಗಳ ಬಳಿಕ ಗರಡಿಗಳಲ್ಲಿ ಚಾಕರಿ ಪೂಜನ ಮಾಡುವವರೇ ಇಲ್ಲವಾಗಿ ಗರಡಿಗಳು ವೈದಿಕರ ಪರಾವಲಂಭನೆಗೆ ಒಳಗಾಗುವ ಅಪಾಯವಿದೆ ಎಂದು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಹೇಳಿದ್ದಾರೆ.

ಸೋಮವಾರ ನಡೆದ ಏಣಗುಡ್ಡೆ ಶ್ರೀಬ್ರಹ್ಮ ಬೈದೇರುಗಳ ಗರಡಿ ಬ್ರಹ್ಮಕಲ ಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತಿದ್ದರು.

ಸಂಪೂರ್ಣ ತುಳುವ ಸಂಸ್ಕೃತಿಯ ಭಾಗವಾಗಿರುವ ಗರಡಿಗಳ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ 16 ವರ್ಷದ ಮಕ್ಕಳಿಗೆ ಅಲ್ಲಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸಿ ಗರಡಿಯ ಆಚಾರ ವಿಚಾರ, ಉಡುಗೆ ತೊಡುಗೆ, ಪೂಜೆ ಪುನಸ್ಕಾರ ಗಳ, ಸಂಪ್ರದಾಯಗಳ ಬಗ್ಗೆ ತರಬೇತಿ ನೀಡುವ ಕೆಲಸ ಅತ್ಯಗತ್ಯವಾಗಿದೆ ಎಂದು ಅವರು ತಿಳಿಸಿದರು.

ಏಣಗುಡ್ಡೆ ಗರಡಿಯ ಪೂಜಾ ಪೂಜಾರಿ ಇಂಪು ಪೂಜಾರಿ ಸಾಂಸ್ಕೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಶೋಕ್ ಎನ್. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೇಂಜ ಗರಡಿಯ ಉಮೇಶ್ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಸ್ಕತ್ ಉದ್ಯಮಿ ಶಿವಾನಂದ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಗಂಗಾಧರ ಸುವರ್ಣ, ಪ್ರೇಂ ಕುಮಾರ್, ಮುಂಬಯಿ ಸಮಿತಿಯ ಅಧ್ಯಕ್ಷ ಗೋಪಾಲ ಕಾಂಚನ್, ಕಟಪಾಡಿ ವಿಶ್ವನಾಥ ಕ್ಷೇತ್ರದ ಮಾಜಿ ಅಧ್ಯಕ್ಷ ಅಶೋಕ್ ಸುವರ್ಣ, ಪಾತ್ರಿಗಳಾದ ಸುರೇಶ್ ಪಾತ್ರಿ, ಸಂತೋಷ್ ಪಾತ್ರಿ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್ ಸ್ವಾಗತಿಸಿದರು. ಪ್ರವೀಣ್ ಜತ್ತನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರಿತೇಶ್ ಕೋಟ್ಯಾನ್ ವಂದಿಸಿದರು. ಬಳಿಕ ಶ್ರೀವನದುರ್ಗಾ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ದೇಂತಡ್ಕ ಇವರಿಂದ ಯಕ್ಷಾನಂದ ಕುತ್ಪಾಡಿ ವಿರಚಿತ ಅಪ್ಪೆ ಮಾಯಂದಾಲ್ ಯಕ್ಷಗಾನ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News