×
Ad

ಆತ್ರಾಡಿಯಲ್ಲಿ ತಾಯಿ-ಮಗಳ ಕೊಲೆ ಪ್ರಕರಣ; ದುಷ್ಕರ್ಮಿಗಳಿಗಾಗಿ ಪೊಲೀಸ್ ತಂಡದಿಂದ ಶೋಧ

Update: 2022-05-10 21:39 IST

ಹಿರಿಯಡ್ಕ : ಅತ್ರಾಡಿ ಗ್ರಾಮದ ಮದಗ ಮುಳ್ಳುಗುಜ್ಜೆಯಲ್ಲಿ ರವಿವಾರ ರಾತ್ರಿ ನಡೆದ ತಾಯಿ ಮಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಮೃತ ಚೆಲುವಿ 15 ವರ್ಷಗಳ ಹಿಂದೆ ಸುಬ್ರಹ್ಮಣ್ಯ ಎಂಬವರನ್ನು ಮದುವೆ ಆಗಿದ್ದು, ಬಳಿಕ ಅವರೊಂದಿಗೆ ಮನಸ್ತಾಪ ಉಂಟಾಗಿ, ರಶೀದ್ ಎಂಬಾತನ ಜೊತೆ ಕಾರ್ಕಳದಲ್ಲಿ ವಾಸವಾಗಿದ್ದರು. ಆ ಸಮಯ ಆಕೆಗೆ ಇಬ್ಬರು ಮಕ್ಕಳಾಗಿದ್ದರು. ನಂತರ ಚೆಲುವಿ ಹಾಗೂ ರಶೀದ್ ಮಧ್ಯೆ ಗಲಾಟೆಯಾಗಿ ಚೆಲುವಿ ತನ್ನ ಮಕ್ಕಳೊಂದಿಗೆ ತಾಯಿ ಮನೆಯಾದ ಮದಗಕ್ಕೆ ವಾಪಾಸು ಬಂದು ನೆಲೆಸಿದ್ದರು.

ಆ ನಂತರ ಕೂಡ ರಶೀದ್ ಮನೆಗೆ ಬಂದು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಚೆಲುವಿ ತಾಯಿ ಮನೆಯ ಪಕ್ಕದಲ್ಲಿ ಶೆಡ್ ಮಾಡಿ ಕೊಂಡು ತನ್ನ ಮಕ್ಕಳೊಂದಿಗೆ ವಾಸವಾಗಿದ್ದಳು. ಈ ಮಧ್ಯೆ ಚೆಲುವಿ ಬೇರೆ ವ್ಯಕ್ತಿಯ ಜೊತೆ ಸಂಬಂಧ ಹೊಂದಿದ್ದು, ಆತನೇ ಈ ಕೃತ್ಯ ಎಸಗಿರಬೇಕೆಂದು  ಪೊಲೀಸರು ಶಂಕಿಸಿ, ಆ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಆಕೆಯ ಗಂಡ ಸುಬ್ರಹ್ಮಣ್ಯ ಹಾಗೂ ರಶೀದ್ ಅವರ ಪಾತ್ರ ಇಲ್ಲ ಎಂದು ಪೊಲೀಸ್ ಮೂಲಗಳು ದೃಢ ಪಡಿಸಿದೆ. ಚೆಲುವಿಯ ಮೊಬೈಲ್ ಕಾಲ್ ಡಿಟೈಲ್ಸ್ ಆಧಾರದಲ್ಲಿ ಆರೋಪಿಯನ್ನು ಪತ್ತೆ ಹಚ್ಚಲಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಈ ನಿಟ್ಟಿನಲ್ಲಿ ಪೊಲೀಸರು ಶಂಕಿತ ಆರೋಪಿಯ ಕುರಿತು ಮಾಹಿತಿ ಸಂಗ್ರಹಿ ಸುತ್ತಿದ್ದು, ಅದಕ್ಕಾಗಿ ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದ ಹಿರಿಯಡ್ಕ ಎಸ್ಸೈ ಅನಿಲ್ ಮಾದರ ಹಾಗೂ ಕೋಟ ಎಸ್ಸೈ ಮಧು ಅವರ ತಂಡಗಳು ಹೊರ ಜಿಲ್ಲೆಗೆ ತೆರಳಿದೆ ಎಂದು ತಿಳಿದುಬಂದಿದೆ. ಆದರೆ ಈ ವರೆಗೆ ಯಾರನ್ನು ಕೂಡ ವಶಕ್ಕೆ ಪಡೆದುಕೊಂಡಿಲ್ಲ ಎಂದು ಎಸ್ಪಿ ಎನ್.ವಿಷ್ಣು ವರ್ಧನ್ ಸ್ಪಷ್ಟಪಡಿಸಿದ್ದಾರೆ.

ತಾಯಿ ಮುನಿಯಮ್ಮ ಹಾಗೂ ಚೆಲುವಿಯ ಮಗ ಭದ್ರಾವತಿಗೆ ತೆರಳಿದ್ದ ಸಮಯ ಮೇ 8ರಂದು ರಾತ್ರಿ ಚೆಲುವಿ ಮತ್ತು ಆಕೆಯ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಮೃತರ ಸಹೋದರಿ ದೇವಿ ನೀಡಿದ ದೂರಿನಂತೆ  ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News