ಚುನಾವಣೆಯಲ್ಲಿ 150 ಸೀಟುಗಳನ್ನು ಗೆಲ್ಲುವ ಗುರಿ: ನಳಿನ್‌ ಕುಮಾರ್

Update: 2022-05-10 16:27 GMT

ಉಡುಪಿ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸೀಟುಗಳನ್ನು ಗೆಲ್ಲುವ ಗುರಿಯೊಂದಿಗೆ ಸಿದ್ಧೆತಗಳನ್ನು ಪ್ರಾರಂಭಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹೇಳಿದ್ದಾರೆ.

ನಗರದ ಹೊಟೇಲ್ ಕಿದಿಯೂರಿನಲ್ಲಿ ಉಡುಪಿ ಜಿಲ್ಲಾ ಬಿಜೆಪಿಯ ಆಶ್ರಯದಲ್ಲಿ ಮಂಗಳವಾರ ನಡೆದ ಬಿಜೆಪಿ ಕರ್ನಾಟಕ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಶಂಖವನ್ನು ಮೊಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದೇಶದಲ್ಲಿ ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಡೆದ ಅಭೂತಪೂರ್ವ ಗೆಲುವು ನಮ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಅಧಿಕಾರ ಬಿಜೆಪಿಯ ಸಂಕಲ್ಪ ಅಲ್ಲ. ಆದರೆ ಜನರಿಂದ ಅಧಿಕಾರ ಪಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಇಡೀ ವಿಶ್ವವೇ ಭಾರತವನ್ನು ಇಂದು ಗುರುತಿಸುವಂತೆ ಮಾಡಿದ್ದೇವೆ. ಪ್ರತಿಯೊಬ್ಬನೂ ತಾನು ಭಾರತೀಯ ಎಂದು ಎದೆತಟ್ಟಿ ಹೇಳುವಂತೆ ಮಾಡಿದ್ದೇವೆ ಎಂದರು.

ಈ ದೇಶವನ್ನು ಸುದೀರ್ಘ ಅವಧಿಗೆ ಆಳಿದ ಕಾಂಗ್ರೆಸ್ ಈ ದೇಶಕ್ಕೆ ನೀಡಿದ ಕೊಡುಗೆಗಳೆಂದರೆ ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಪರಿವಾರ್ ಮಾತ್ರ.  ಕಾಂಗ್ರೆಸ್ ಆಡಳಿತದಲ್ಲಿ ಹಗರಣಗಳ ಸರಮಾಲೆಯೇ ನಡೆದಿದೆ. ಆದರೆ ಅಟಲ್ ಬಿಹಾರಿ ವಾಜಪೇಯ ನೇತೃತ್ವದ ಸರಕಾರ ಹಾಗೂ ನರೇಂದ್ರ ಮೋದಿ ನೇತೃತ್ವದ ಸರಕಾರದ ಅವಧಿಗಳಲ್ಲಿ ಒಂದೇ ಒಂದು ಭ್ರಷ್ಟಾಚಾರ ಹಗರಣ ನಡೆದಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ರಾಜ್ಯದಲ್ಲೂ ಕಾಂಗ್ರೆಸ್ ಸರಕಾರ ಅಧಿಕಾರವನ್ನು ಕಳೆದುಕೊಂಡ ಮೇಲೆ ಗಲಭೆಯನ್ನು ಹುಟ್ಟುಹಾಕುತ್ತಿದೆ ಎಂದು ಆರೋಪಿಸಿದ ಕಟೀಲ್, ಸಿದ್ದರಾಮಯ್ಯ ಅವಧಿಯಲ್ಲಿ ನಡೆದ ಅರ್ಕಾವತಿ ಹಾಗೂ ಇತರ ಹಗರಣದ ತನಿಖೆ ನಡೆದರೆ ಅವರು ಶಾಶ್ವತವಾಗಿ ಜೈಲು ಸೇರಬೇಕಾಗುತ್ತದೆ ಎಂದು ಅವರಿಗೆ ಭಯ ಶುರುವಾಗಿದೆ ಎಂದರು.

ಈಗ ರಾಜ್ಯದಲ್ಲಿ ಅಲ್ಲಲ್ಲಿ ನಡೆಯುತ್ತಿರುವ ಗಲಭೆಗಳ ಹಿಂದೆ ಕಾಂಗ್ರೆಸ್‌ನ ಕೈವಾಡವಿದೆ. ಅರಾಜಕತೆ ಹುಟ್ಟುಹಾಕು ವುದು, ಒಡೆದಾಳುವ ನೀತಿ ಅದರ ಹುಟ್ಟುಗುಣ. ಹುಬ್ಬಳ್ಳಿ ಗಲಭೆಯ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಎಂದು  ಕಟೀಲ್ ಆರೋಪಿಸಿದರು.

೨೦೧೪ರ ಬಳಿಕ ದೇಶದಲ್ಲಿ ಹೊಸ ಯುಗ ಪ್ರಾರಂಭಗೊಂಡಿದೆ. ಇನ್ನು ಮುಂದೆ ದೇಶದಲ್ಲಿ ಬರೀ ಮೋದಿ ಯುಗ ಎಂದು ಸಾರಿದ ಕಟೀಲ್, ಭಯೋತ್ಪಾದನೆ ಹಾಗೂ ನಕ್ಸಲ್‌ರನ್ನು ಮಟ್ಟಹಾಕುವ ಕೆಲಸವನ್ನು ಬಿಜೆಪಿ ಮಾಡಿದೆ. ಇಡೀ ಕರ್ನಾಟಕವನ್ನು ಬಿಜೆಪಿ ಕಲ್ಯಾಣ ಕರ್ನಾಟಕ ಮಾಡಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡ ಜಲಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿದರು. 

ವೇದಿಕೆಯಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ಕುಮಾರ್, ಶಾಸಕರಾದ ರಘುಪತಿ ಭಟ್ ಮತ್ತು ಲಾಲಾಜಿ ಮೆಂಡನ್ ಉಪಸ್ಥಿತರಿದ್ದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಸ್ವಾಗತಿಸಿದರೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ವಂದಿಸಿದರು. ರಾಜ್ಯ ಪದಾಧಿಕಾರಿ ಗಿರೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News