ಶ್ರೀಲಂಕಾ: ತಕ್ಷಣ ಸಂಸತ್ ಅಧಿವೇಶನ ಕರೆಯಲು ಸ್ಪೀಕರ್ ಸೂಚನೆ

Update: 2022-05-10 18:40 GMT

ಕೊಲಂಬೊ, ಮೇ 10: ದೇಶದಲ್ಲಿ ಸರಕಾರವನ್ನು ವಿರೋಧಿಸಿ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆ ಮತ್ತು ತೀವ್ರ ಹಿಂಸಾಚಾರದ ಹಿನ್ನೆಲೆಯಲ್ಲಿ, ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಚರ್ಚಿಸಲು ತಕ್ಷಣ ಸಂಸತ್ ಅಧಿವೇಶ ಕರೆಯುವಂತೆ ಶ್ರೀಲಂಕಾ ಅಧ್ಯಕ್ಷ ಗೊತಬಯ ರಾಜಪಕ್ಸಗೆ ಸಂಸತ್ತಿನ ಸ್ಪೀಕರ್ ಮಹಿಂದಾ ಯಪ ಅಬೆವರ್ದನ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 ದೇಶದಲ್ಲಿನ ಪ್ರಸ್ತುತ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಸಂಸತ್ ಅಧಿವೇಶನ ಕರೆಯಲು ಸ್ಪೀಕರ್ ಗೆ ಅಧಿಕಾರವಿದೆ ಎಂದು ಶ್ರೀಲಂಕಾದ ಸರ್ಜಂಟ್ ಅಟ್ ಆರ್ಮ್ಸ್(ಸಂಸತ್ ಕಲಾಪ ಸುಗಮವಾಗಿ ಸಾಗುವಂತೆ ನೋಡಿಕೊಳ್ಳುವ ಅಧಿಕಾರಿ) ನರೇಂದ್ರ ಫೆರ್ನಾಂಡೊರನ್ನು ಉಲ್ಲೇಖಿಸಿ ಡೈಲಿ ಮಿರರ್ ವರದಿ ಮಾಡಿದೆ. ಈ ಮಧ್ಯೆ, ಸೋಮವಾರ ಶ್ರೀಲಂಕಾದ ಕೊಲಂಬೊ ಮತ್ತು ಇತರ ನಗರಗಳಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೇರಿದೆ. ಇತರ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
 

ಅಸಾಮಾನ್ಯ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದ್ವೀಪರಾಷ್ಟ್ರದಲ್ಲಿ ಅಧ್ಯಕ್ಷ ಮತ್ತು ಸರಕಾರದ ರಾಜೀನಾಮೆಗೆ ಆಗ್ರಹಿಸಿ ಕಳೆದ ಒಂದು ತಿಂಗಳಿಂದ ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸೋಮವಾರ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸರ ಬೆಂಬಲಿಗರು ದಾಳಿಮಾಡಿ ಹಲ್ಲೆ ಮಾಡಿದ್ದು ಹಲವೆಡೆ ಹಿಂಸಾಚಾರ ನಡೆದಿದೆ. ಹಂಬನ್ತೊಟ ನಗರದಲ್ಲಿರುವ ರಾಜಪಕ್ಸ ಕುಟುಂಬಿಕರ ಪೂರ್ವಜರ ಮನೆ ಸಹಿತ, ಹಲವು ರಾಜಕಾರಣಿಗಳ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ದಾಳಿಗೆ ಪ್ರಚೋದನೆ ನೀಡಿದ ಕಾರಣಕ್ಕೆ ಮಹಿಂದಾ ರಾಜಪಕ್ಸರನ್ನು ಬಂಧಿಸಬೇಕು ಎಂದು ವಿಪಕ್ಷಗಳು ಆಗ್ರಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News