ಶ್ರೀಲಂಕಾ ಬಿಕ್ಕಟ್ಟು ಪರಿಹರಿಸಲು ಭಾರತದಸೈನಿಕರು ಶ್ರೀಲಂಕಕ್ಕೆ ತೆರಳಿದ್ದಾರೆಂಬ ವರದಿ ಕುರಿತು ಅಧಿಕೃತರು ಹೇಳಿದ್ದೇನು?

Update: 2022-05-11 16:55 GMT

ಹೊಸದಿಲ್ಲಿ, ಮೇ 11: ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಶ್ರೀಲಂಕಾಕ್ಕೆ ಭಾರತ ತನ್ನ ಯೋಧರನ್ನು ಕಳುಹಿಸಿಕೊಟ್ಟಿದೆ ಎಂಬ ವರದಿಯನ್ನು ಕೊಲೊಂಬೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಬುಧವಾರ ನಿರಾಕರಿಸಿದೆ.

 ಮಾಜಿ ಮುಖ್ಯಮಂತ್ರಿ ಮಹಿಂದಾ ರಾಜಪಕ್ಷ ಅವರು ಶ್ರೀಲಂಕಾದ ಈಶಾನ್ಯದಲ್ಲಿರುವ ತ್ರಿನ್ಕೋಮಾಲೀ ನೌಕಾ ನೆಲೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮದಲ್ಲಿ ವರದಿ ಪ್ರಕಟವಾದ ಬಳಿಕ ನೌಕಾ ನೆಲೆಯ ಹೊರಗೆ ಪ್ರತಿಭಟನೆ ಭುಗಿಲೆದ್ದಿತ್ತು. ಸರಕಾರದ ವಿರುದ್ಧದ ಪ್ರತಿಭಟನೆಯ ನಡುವೆ ರಾಜಪಕ್ಷ ಅವರು ಸೋಮವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು.

‘‘ನಿರ್ದಿಷ್ಟ ರಾಜಕೀಯ ವ್ಯಕ್ತಿಗಳು ಹಾಗೂ ಅವರ ಕುಟುಂಬಗಳು ಭಾರತಕ್ಕೆ ಪರಾರಿಯಾಗಿವೆ ಎಂಬ ವದಂತಿಯನ್ನು ಮಾಧ್ಯಮದ ವರ್ಗವೊಂದು ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವುದನ್ನು ಭಾರತೀಯ ರಾಯಭಾರಿ ಕಚೇರಿ ಇತ್ತೀಚೆಗೆ ಗಮನಿಸಿದೆ’’ ಎಂದು ಭಾರತೀಯ ರಾಯಭಾರಿ ಕಚೇರಿ ಮಂಗಳವಾರ ಬೆಳಗ್ಗೆ ಮಾಡಿದ ಟ್ವೀಟ್ನಲ್ಲಿ ತಿಳಿಸಿದೆ. ‘‘ಇವುಗಳು ನಕಲಿ ಹಾಗೂ ಸ್ಪಷ್ಟವಾಗಿ ಸುಳ್ಳು ವರದಿಗಳಾಗಿದ್ದು, ಇವುಗಳಲ್ಲಿ ಯಾವುದೇ ನಿಜಾಂಶ ಅಥವಾ ತಿರುಳಿಲ್ಲ’’ ಎಂದು ರಾಯಭಾರಿ ಕಚೇರಿ ತಿಳಿಸಿದೆ.

 ಶ್ರೀಲಂಕಾಕ್ಕೆ ಭಾರತ ತನ್ನ ಯೋಧರನ್ನು ಕಳುಹಿಸುತ್ತಿದೆ ಎಂಬ ಕುರಿತ ‘ವದಂತಿಯ ಮಾಧ್ಯಮ ವರದಿ’ಗಳನ್ನು ಬುಧವಾರ ಸ್ಪಷ್ಟವಾಗಿ ನಿರಾಕರಿಸಿರುವ ಭಾರತೀಯ ರಾಯಭಾರಿ ಕಚೇರಿ, ಈ ವರದಿಗಳು ಭಾರತ ಸರಕಾರದ ನಿಲುವಿಗೆ ಅನುಗುಣವಾಗಿಲ್ಲ ಎಂದಿದೆ.

‘‘ಶ್ರೀಲಂಕಾದ ಪ್ರಜಾಪ್ರಭುತ್ವ, ಸ್ಥಿರತೆ ಹಾಗೂ ಆರ್ಥಿಕ ಚೇತರಿಕೆಯನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ನಿನ್ನೆ (ಮೇ 10) ಸ್ಪಷ್ಟವಾಗಿ ಹೇಳಿದ್ದರು’’ ಎಂದು ರಾಯಭಾರಿ ಕಚೇರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News