"ತಾಜ್ ಮಹಲ್ ಯಾರು ನಿರ್ಮಿಸಿದ್ದು ಎಂದು ನಿರ್ಧರಿಸಲು ನಾವು ಇಲ್ಲಿ ಕುಳಿತಿರುವುದೇ?": ಅಲಹಾಬಾದ್‌ ಹೈಕೋರ್ಟ್‌ ತರಾಟೆ

Update: 2022-05-12 09:44 GMT

ಲಕ್ನೋ: ಆಗ್ರಾದ ತಾಜ್‍ಮಹಲ್‍ನಲ್ಲಿ ಹಿಂದು ದೇವರ ವಿಗ್ರಹಗಳು ಅಥವಾ ಧಾರ್ಮಿಕ ಗ್ರಂಥಗಳಿವೆಯೇ ಎಂದು ಪರಿಶೀಲಿಸಲು ಅದರ 20 ಸೀಲ್ ಮಾಡಲ್ಪಟ್ಟ ಕೊಠಡಿಗಳನ್ನು ತೆರೆಯಲು ಪುರಾತತ್ವ ಶಾಸ್ತ್ರ ಇಲಾಖೆಗೆ ಸೂಚಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದ ಬಿಜೆಪಿಯ ಅಯೋಧ್ಯೆ ಘಟಕದ ಮಾಧ್ಯಮ ಉಸ್ತುವಾರಿ ಡಾ. ರಜನೀಶ್ ಸಿಂಗ್ ಎಂಬವರನ್ನು ಗುರುವಾರ ಅಲಹಾಬಾದ್ ಹೈಕೋರ್ಟಿನ ಲಕ್ನೋ ಪೀಠ ತರಾಟೆಗೆ ತೆಗೆದುಕೊಂಡಿದೆ.

"ಇಂತಹ ವಿಚಾರಗಳ ಚರ್ಚೆಗಳು ಡ್ರಾಯಿಂಗ್ ರೂಂನಲ್ಲಿ ನಡೆಯಬೇಕು ನ್ಯಾಯಾಲಯಗಳಲ್ಲ" ಎಂದು ಜಸ್ಟಿಸ್ ಡಿ.ಕೆ ಉಪಾಧ್ಯಾಯ ಮತ್ತು ಜಸ್ಟಿಸ್ ಸುಭಾಶ್ ವಿದ್ಯಾರ್ಥಿ ಅವರ ಪೀಠ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

"ನಾಳೆ ನೀವು ಬಂದು ಈ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರ ಚೇಂಬರ್‍ಗಳಿಗೆ ಪ್ರವೇಶ ಕೋರಿ ಬರುತ್ತೀರೇನು? ಆ ಕಟ್ಟಡ (ತಾಜ್ ಮಹಲ್) ಅನ್ನು ಶಾಹ್ ಜಹಾನ್ ನಿರ್ಮಿಸಿಲ್ಲ ಎಂದು ನೀವು ಹೇಳುತ್ತಿದ್ದೀರಿ. ನಾವು ಇಲ್ಲಿ ಆ ಕುರಿತು ತೀರ್ಪು ನೀಡಲು ಕುಳಿತಿದ್ದೇನು? ನೀವು ನಂಬಿರುವ ಐತಿಹಾಸಿಕ ವಾಸ್ತವಗಳಿಗೆ ನಮ್ಮನ್ನು ಕರೆದುಕೊಂಡು ಹೋಗಬೇಡಿ" ಎಂದು ಪೀಠ ಹೇಳಿತು.

"ಇಂತಹ ಒಂದು ಮನವಿಯನ್ನು ಸಂಬಂಧಿತ ಪ್ರಾಧಿಕಾರಗಳು ಭದ್ರತಾ ಕಾರಣಗಳಿಗೆ ತಿರಸ್ಕರಿಸಿವೆ, ಇದರಿಂದ ಬಾಧಿತರಾಗಿದ್ದರೆ ಅರ್ಜಿದಾರರು ಪ್ರಾಧಿಕಾರಗಳನ್ನು ಪ್ರಶ್ನಿಸಬೇಕು" ಎಂದು ನ್ಯಾಯಪೀಠ ಹೇಳಿದೆ. ಕೊಠಡಿಗಳಲ್ಲಿ ಏನಿದೆ ಎಂದು ತಿಳಿಯುವ ಹಕ್ಕಿದೆ  ಅನುಮತಿಸದೇ ಇದ್ದರೆ ತನ್ನ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅರ್ಜಿದಾರರು ಹೇಳಿದಾಗ  ಯಾವ ಹಕ್ಕು ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠ ಪ್ರಶ್ನಿಸಿತು.

ಈ ಅರ್ಜಿಯನ್ನು ವಿರೋಧಿಸಿದ ಉತ್ತರ ಪ್ರದೇಶ ಸರಕಾರದ ಪರ ವಕೀಲರು ಈಗಾಗಲೇ ಇಂತಹ ಒಂದು ಅರ್ಜಿ ಆಗ್ರಾ ನ್ಯಾಯಾಲಯದ ಮುಂದಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News