ಸ್ಯಾಮ್ಸ್ ಸೂಪರ್ ಬೌಲಿಂಗ್, ತಿಲಕ್ ವರ್ಮಾ ಸಾಂದರ್ಭಿಕ ಬ್ಯಾಟಿಂಗ್ : ಚೆನ್ನೈಗೆ ಸೋಲುಣಿಸಿದ ಮುಂಬೈ

Update: 2022-05-12 17:41 GMT
ಡೇನಿಯಲ್ ಸ್ಯಾಮ್ಸ್,  Photo: twitter

      ಮುಂಬೈ, ಮೇ 12: ಡೇನಿಯಲ್ ಸ್ಯಾಮ್ಸ್ (3-16) ನೇತೃತ್ವದ ಬೌಲರ್‌ಗಳ ಸಂಘಟಿತ ದಾಳಿ ಹಾಗೂ ತಿಲಕ್ ವರ್ಮಾ(ಔಟಾಗದೆ 34 ರನ್, 32 ಎಸೆತ, 4 ಬೌಂಡರಿ)ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ 59ನೇ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು 98 ರನ್ ಸುಲಭ ಸವಾಲು ಪಡೆದ ಮುಂಬೈ 14.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿತು. ತಿಲಕ್ ವರ್ಮಾ(ಔಟಾಗದೆ 34), ಹೃತಿಕ್ ಶೋಕೀನ್(18 ರನ್) ,ಟಿಮ್ ಡೇವಿಡ್(ಔಟಾಗದೆ 16)ಹಾಗೂ ರೋಹಿತ್ ಶರ್ಮಾ(18 ರನ್) ಎರಡಂಕೆಯ ಸ್ಕೋರ್ ಗಳಿಸಿ ಮುಂಬೈಗೆ ಗೆಲುವು ತಂದುಕೊಟ್ಟರು.

ಚೆನ್ನೈ ಪರ ಮುಕೇಶ್ ಚೌಧರಿ(3-23)ಯಶಸ್ವಿ ಬೌಲರ್ ಎನಿಸಿಕೊಂಡರು. ಸಿಮರ್‌ಜೀತ್ ಸಿಂಗ್(1-22) ಹಾಗೂ ಮೊಯಿನ್ ಅಲಿ(1-17)ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ಪರ ನಾಯಕ ಮಹೇಂದ್ರ ಸಿಂಗ್ ಧೋನಿ (ಔಟಾಗದೆ 36 ರನ್,33 ಎಸೆತ, 4 ಬೌಂಡರಿ, 2 ಸಿಕ್ಸರ್)ಏಕಾಂಗಿ ಹೋರಾಟದ ಹೊರತಾಗಿಯೂ 16 ಓವರ್‌ಗಳಲ್ಲಿ ಕೇವಲ 97 ರನ್‌ಗೆ ಆಲೌಟಾಗಿದೆ. 

 ಡ್ವೇಯ್ನ ಬ್ರಾವೊ(12 ರನ್), ಅಂಬಟಿ ರಾಯುಡು(10)ಹಾಗೂ ಶಿವಂ ದುಬೆ(10)ಎರಡಂಕೆಯ ಸ್ಕೋರ್ ಗಳಿಸಿದರು. ಮುಂಬೈ ವೇಗದ ಬೌಲರ್ ಡೇನಿಯಲ್ ಸ್ಯಾಮ್ಸ್ ಇನಿಂಗ್ಸ್‌ನ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಡೆವೊನ್ ಕಾನ್ವೇ(0)ಹಾಗೂ 4ನೇ ಎಸೆತದಲ್ಲಿ ಮೊಯಿನ್ ಅಲಿ(0)ವಿಕೆಟನ್ನು ಉರುಳಿಸಿ ಚೆನ್ನೈಗೆ ಆರಂಭಿಕ ಆಘಾತ ನೀಡಿದರು. 2ನೇ ಓವರ್‌ನಲ್ಲಿ ರಾಬಿನ್ ಉತ್ತಪ್ಪ(0)ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು. ಮತ್ತೊಮ್ಮೆ ಉತ್ತಮ ದಾಳಿ ಸಂಘಟಿಸಿದ ಸ್ಯಾಮ್ಸ್ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್(7)ವಿಕೆಟನ್ನು ಉರುಳಿಸಿದರು. ಅಂಬಟಿ ರಾಯುಡು ಹಾಗೂ ಶಿವಂ ದುಬೆಗೆ ರಿಲೆ ಮೆರೆಡಿತ್ (2-27)ಪೆವಿಲಿಯನ್ ಹಾದಿ ತೋರಿಸಿದರು. ಸ್ಪಿನ್ನರ್ ಕುಮಾರ್ ಕಾರ್ತಿಕೇಯ (2-22) ಅವರು ಬ್ರಾವೊ ಹಾಗೂ ಸಿಮರ್‌ಜೀತ್ ಸಿಂಗ್(2)ವಿಕೆಟ್‌ಗಳನ್ನು ಉರುಳಿಸಿ ಚೆನ್ನೈ ಸಂಕಷ್ಟ ಹೆಚ್ಚಿಸಿದರು. ಮುಕೇಶ್ ಚೌಧರಿ(4) ರನೌಟಾಗುವುದರೊಂದಿಗೆ ಚೆನ್ನೈ ಇನಿಂಗ್ಸ್‌ಗೆ ತೆರೆ ಬಿತ್ತು.

12 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಹಾಗೂ 8ರಲ್ಲಿ ಸೋಲನುಭವಿಸಿರುವ ಚೆನ್ನೈ 8 ಅಂಕ ಗಳಿಸಿ ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಮುಂಬೈ 12 ಪಂದ್ಯಗಳಲ್ಲಿ 3ರಲ್ಲಿ ಜಯ ಸಾಧಿಸಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News