ಉತ್ತರ ಕೊರಿಯಾದಲ್ಲಿ ಕೋವಿಡ್ ಸೋಂಕಿಗೆ ಮೊದಲ ಬಲಿ

Update: 2022-05-13 01:59 GMT
ಸಾಂದರ್ಭಿಕ ಚಿತ್ರ

ಪ್ಯಾಂಗ್ಯಾಂಗ್: ವಿಶ್ವದ ಬಹುತೇಕ ಭಾಗಗಳನ್ನು ಕೋವಿಡ್-19 ಸಾಂಕ್ರಾಮಿಕ ಬಾಧಿಸಿದರೂ, ಎರಡೂವರೆ ವರ್ಷದಿಂದ ಸೋಂಕನ್ನು ದೂರ ಇರಿಸಿದ್ದ ಉತ್ತರ ಕೊರಿಯಾದಲ್ಲಿ ಇದೀಗ ಕೋವಿಡ್-19 ಸೋಂಕು ಅಬ್ಬರಿಸಿದ್ದು, ಜ್ವರದಿಂದ ಆರು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಒಬ್ಬ ಕೋವಿಡ್-19 ಸೋಂಕಿತ ವ್ಯಕ್ತಿ ಎಂದು ಸರ್ಕಾರ ದೃಢಪಡಿಸಿದೆ.

"ಎಪ್ರಿಲ್ ಕೊನೆಯಿಂದ ದೇಶವ್ಯಾಪಿ ಹರಡಿರುವ ಜ್ವರದ ಕಾರಣವನ್ನು ಗುರುತಿಸಲು ಸಾಧ್ಯವಾಗಿಲ್ಲ, ಜ್ವರದಿಂದ ಆರು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಒಬ್ಬ ವ್ಯಕ್ತಿಗೆ ಒಮೈಕ್ರಾನ್ ಪ್ರಬೇಧದ ಬಿಎ-2 ಸೋಂಕು ದೃಢಪಟ್ಟಿತ್ತು ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ.

ಖಚಿತಪಡಿಸಲು ಸಾಧ್ಯವಾಗದ ಮೂಲದ ಜ್ವರದಿಂದ ಬಳಲುತ್ತಿರುವ 1,87,800 ಮಂದಿಗೆ ಐಸೊಲೇಶನ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇಶವ್ಯಾಪಿ ಸ್ಫೋಟಕ ಪ್ರಮಾಣದಲ್ಲಿ ಜ್ವರ ಹರಡಿದೆ ಎಂದು ಅಧಿಕೃತ ಕೆಸಿಎನ್‍ಎ ಸುದ್ದಿಸಂಸ್ಥೆ ವರದಿ ಮಾಡಿದೆ.

ಸುಮಾರು 3.5 ಲಕ್ಷ ಮಂದಿಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದು, ಮಂಗಳವಾರ ಒಂದೇ ದಿನದಲ್ಲಿ 18 ಸಾವಿರ ಮಂದಿ ಜ್ವರಪೀಡಿತರಾಗಿದ್ದಾರೆ ಎಂದು ಕೆಸಿಎನ್‍ಎ ಹೇಳಿದೆ. ಇದುವರೆಗೆ 1.62 ಲಕ್ಷ ಮಂದಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆದರೆ ಎಷ್ಟು ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂಬ ಅಂಶವನ್ನು ಬಹಿರಂಗಪಡಿಸಿಲ್ಲ.

ವೈರಸ್ ತಡೆ ಕಮಾಂಡ್ ಸೆಂಟರ್‍ಗೆ ಅಧ್ಯಕ್ಷ ಕಿಮ್ ಜಾಂಗ್ ಉನ್ ಭೇಟಿ ನೀಡಿದ್ದು, ಇದು ಗಂಭೀರ ರಾಷ್ಟ್ರೀಯ ತುರ್ತು ಸ್ಥಿತಿ ಎಂದು ಬಣ್ಣಿಸಿದ್ದಾರೆ. ದೇಶವ್ಯಾಪಿ ಲಾಕ್‍ಡೌನ್‍ಗೆ ಆದೇಶಿಸಿದ್ದಾರೆ.

ಈ ಮಧ್ಯೆ ಉತ್ತರ ಕೊರಿಯಾಗೆ ಕೋವಿಡ್-19 ಲಸಿಕೆ ರಫ್ತು ಮಾಡುವ ಯಾವುದೇ ಉದ್ದೇಶ ಇಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಕಿ ಈ ಸಂಬಂಧ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News