ನಕಲಿ ಪನೀರ್ ತಯಾರಿ ಜಾಲ ಬೇಧಿಸಿದ ಪೊಲೀಸರು: 2000 ಕೆಜಿ ಪನೀರ್ ವಶ; 7 ಮಂದಿಯ ಬಂಧನ

Update: 2022-05-13 06:56 GMT

ಮುಂಬೈ: ಬದ್ಲಾಪುರ್ ಮತ್ತು ಭಿವಂಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಎರಡು ನಕಲಿ ಪನೀರ್ ತಯಾರಿಕಾ ಘಟಕಗಳಿಗೆ ದಾಳಿ ನಡೆಸಿರುವ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಏಳು ಮಂದಿಯನ್ನು ಬಂಧಿಸಿ 2131 ಕೆಜಿ ನಕಲಿ ಪನೀರ್ ವಶಪಡಿಸಿಕೊಂಡಿದ್ದಾರೆ ಎಂದು timesofindia ವರದಿ ಮಾಡಿದೆ.

ಈ ನಕಲಿ ಹಾಗೂ "ಆರೋಗ್ಯಕ್ಕೆ ಮಾರಕ''ವಾಗಿರುವ ಪನೀರ್ ಅನ್ನು ಈ ಘಟಕಗಳಿಂದ ಕಳೆದೊಂದು ವರ್ಷಗಳಿಂದ ಮುಂಬೈ ಉಪನಗರಿ ಮತ್ತು ದಕ್ಷಿಣ ಮುಂಬೈ ಪ್ರದೇಶದ ರೆಸ್ಟಾರೆಂಟ್‍ಗಳಿಗೆ ಪೂರೈಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 6ರಂದು ಪೊಲೀಸರು ಚೆಂಬೂರಿನಲ್ಲಿ ಒಂದು ಟೆಂಪೋ ತಡೆದು ಅದರಲ್ಲಿದ್ದ ನಕಲಿ 631 ಕೆಜಿ ಪನೀರ್ ವಶಪಡಿಸಿಕೊಂಡಿದ್ದರು. ಚೆಂಬೂರಿನ ಡೈರಿ ಒಂದಕ್ಕೆ ಸಾಗಿಸಲಾಗುತ್ತಿದ್ದ ಈ ಪನೀರ್ ಮಾದರಿಗಳನ್ನು ಎಫ್‍ಡಿಎಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಈ ಪನೀರ್ ನಲ್ಲಿ ಎಣ್ಣೆಯಿದೆ ಹಾಗೂ ಆರೋಗ್ಯಕ್ಕೆ ಹಾನಿಕರ ಎಂದು ವರದಿ ತಿಳಿಸಿತ್ತು.

ನಂತರ ಎಫ್‍ಡಿಎ ಅಧಿಕಾರಿಯೊಬ್ಬರು ಚೆಂಬೂರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಕ್ರೈಂ ಬ್ರಾಂಚ್ ತನಿಖೆ ಕೈಗೆತ್ತಿಕೊಂಡಿತ್ತು.

ನಂತರ ಬದ್ಲಾಪುರ್ ಎಂಬಲ್ಲಿನ ಯಶೋದಾ ಆರ್ಗಾನಿಕ್ ಫುಡ್ ಹಾಗೂ ಭಿವಂಡಿಯಲ್ಲಿನ ದಿಶಾ ಡೈರಿಗೆ ದಾಳಿ ನಡೆಸಿ ಫ್ಯಾಕ್ಟರಿಗಳ ಮಾಲಕರ ಸಹಿತ ಏಳು ಮಂದಿಯನ್ನು ಬಂಧಿಸಲಾಗಿದೆ. ತಾಳೆ ಎಣ್ಣೆ, ಹಾಲಿನ ಹುಡಿ ಮತ್ತು ಪನೀರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಉತ್ತಮ ಗುಣಮಟ್ಟದ ಮಲಾಯಿ ಪನೀರ್ ಬೆಲೆ ಕೆಜಿಗೆ ರೂ. 400ರಷ್ಟಿದ್ದರೆ ಈ ನಕಲಿ ಪನೀರ್ ಅನ್ನು ರೂ. 200ರಿಂದ ರೂ. 250ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಹಾಲಿನ ಬದಲು ಹಾಲಿನ ಹುಡಿ ಬಳಸಿ ಅದಕ್ಕೆ ಪಾಮೋಲೀನ್ ಎಣ್ಣೆ ಅಥವಾ ಕಳಪೆ ಗುಣಮಟ್ಟದ ಎಣ್ಣೆ ಸೇರಿಸಿ ಪನೀರ್ ಸಿದ್ಧಪಡಿಸಲಾಗುತ್ತಿತ್ತು, ದಿನವೊಂದಕ್ಕೆ 2000 ಕೆಜಿ ಪನೀರ್ ಅನ್ನು ಒಂದು ಫ್ಯಾಕ್ಟರಿ ಮಾರಾಟ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News