ದಿಲ್ಲಿಯ ಶೇ. 70 ಮನೆಗಳನ್ನು ನೆಲಸಮಗೊಳಿಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ: ಮನೀಶ್ ಸಿಸೋಡಿಯಾ

Update: 2022-05-13 10:24 GMT
ಮನೀಶ್ ಸಿಸೋಡಿಯಾ

ಹೊಸದಿಲ್ಲಿ: ರಾಜಧಾನಿಯ ಜನಸಂಖ್ಯೆಯ ಶೇ. 70ರಷ್ಟು ಮಂದಿಯ ಮನೆಗಳನ್ನು ಬಿಜೆಪಿ ನೆಲಸಮಗೊಳಿಸಲು ಉದ್ದೇಶಿಸಿದೆ ಎಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರವನ್ನೂ ಬರೆದಿರುವ ಸಿಸೋಡಿಯಾ, ಒತ್ತುವರಿ ತೆರವು ಕಾರ್ಯಾಚರಣೆಯ ನೆಪದಲ್ಲಿ ಬಿಜೆಪಿ ಆಡಳಿತದ ಮುನಿಸಿಪಲ್ ಕಾರ್ಪೊರೇಷನ್ ನಡೆಸುವ ನೆಲಸಮ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

"ಬುಲ್ ಡೋಜರ್ ಗಳು ಬಳಸಬೇಕಿದ್ದರೆ ಇಂತಹ ಕಟ್ಟಡಗಳ ನಿರ್ಮಾಣಕ್ಕಾಗಿ ಲಂಚ ಪಡೆದ ಬಿಜೆಪಿ ನಾಯಕರು ಮತ್ತು ಸ್ಥಳೀಯಾಡಳಿತ ಪ್ರತಿನಿಧಿಗಳ ಮನೆಗಳನ್ನು ನೆಲಸಮಗೊಳಿಸಲು ಬಳಸಬೇಕು,'' ಎಂದು ಶಾ ಅವರಿಗೆ ಬರೆದ ಪತ್ರದಲ್ಲಿ ಸಿಸೋಡಿಯಾ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್ ನಗರದ 63 ಲಕ್ಷ ಮನೆಗಳನ್ನು ಕೆಡಹುವ ಉದ್ದೇಶ ಹೊಂದಿದೆ, ಇವುಗಳಲ್ಲಿ 60 ಲಕ್ಷ ಮನೆಗಳು ಅನಧಿಕೃತ ಕಾಲನಿಗಳು ಮತ್ತು ಕೊಳೆಗೇರಿಗಳಲ್ಲಿವೆ. ಎಲ್ಲವನ್ನೂ ನೆಲಸಮಗೊಳಿಸಲು ಬಿಜೆಪಿ ಉದ್ದೇಶಿಸಿದೆ. ಅವರಿಗೆ ಅಲ್ಲಿ ಉಳಿದುಕೊಳ್ಳಲು ಮೊದಲು ಹಣ ಪಡೆದು ಈಗ ಮನೆಗಳನ್ನು ನೆಲಸಮಗೊಳಿಸಲಾಗುತ್ತಿದೆ. ಬಾಲ್ಕನಿಯನ್ನು ವಿಸ್ತರಿಸಿದೆ ಹಾಗೂ ಮುಚ್ಚಲ್ಪಟ್ಟ 3 ಲಕ್ಷ ಮನೆಗಳನ್ನೂ ಬಿಜೆಪಿ ನೆಲಸಮಗೊಳಿಸಲಿದೆ,''ಎಂದು ಅವರು ಹೇಳಿದರು.

ತುಘ್ಲಕಾಬಾದ್, ದ್ವಾರಕ, ನ್ಯೂ ಫ್ರೆಂಡ್ಸ್ ಕಾಲನಿ, ಶಹೀನ್ ಬಾಗ್, ರೋಹಿಣಿ ಹಾಗೂ ಜಹಾಂಗೀರಪುರಿ ಮುಂತಾದೆಡೆ ನಡೆಸಲಾದ ನೆಲಸಮ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಸಿಸೋಡಿಯಾ ಇಂದು ಪತ್ರಿಕಾಗೋಷ್ಠಿ ನಡೆಸಿ ಅವುಗಳನ್ನು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News