ತಮಿಳುನಾಡು: ಅಂಬೂರ್‌ ಬಿರಿಯಾನಿ ಮೇಳದಲ್ಲಿ ಬೀಫ್‌, ಪೋರ್ಕ್‌ ಗೆ ನಿಷೇಧ; ಜಿಲ್ಲಾಧಿಕಾರಿಗೆ ನೋಟಿಸ್‌

Update: 2022-05-13 15:06 GMT
ಸಾಂದರ್ಭಿಕ ಚಿತ್ರ (Photo: deccanchronicle.com)

ಅಂಬೂರ್: ತಮಿಳುನಾಡಿನ ಅಂಬೂರಿನಲ್ಲಿ ನಡೆದ ಬಿರಿಯಾನಿ ಉತ್ಸವದಿಂದ ಗೋಮಾಂಸ ಮತ್ತು ಹಂದಿ ಮಾಂಸವನ್ನು ಹೊರಗಿಟ್ಟ ವಿವಾದವು ತೀವ್ರಗೊಂಡಿದ್ದು, ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗವು ತಿರುಪತ್ತೂರಿನ ಜಿಲ್ಲಾಧಿಕಾರಿಗೆ ನೋಟಿಸ್ ಕಳುಹಿಸಿದೆ. ಹಾಗೂ ಈ ಕ್ರಮವನ್ನು ದಲಿತರು ಮತ್ತು ಮುಸ್ಲಿಮರ ವಿರುದ್ಧದ “ತಾರತಮ್ಯ” ಎಂದು ಟೀಕಿಸಿದೆ. ಅದಾಗ್ಯೂ, ಭಾರೀ ಮಳೆಯ ಮುನ್ಸೂಚನೆಯನ್ನು ಉಲ್ಲೇಖಿಸಿ ಕಾರ್ಯಕ್ರಮವನ್ನು ಗುರುವಾರ ಮುಂದೂಡಲಾಗಿದೆ.

ಅಂಬೂರ್ ಟ್ರೇಡ್ ಸೆಂಟರ್‌ನಲ್ಲಿ ಮೇ 13 ರಿಂದ 15 ರವರೆಗೆ ನಡೆಯಲಿರುವ ‘ಅಂಬೂರ್ ಬಿರಿಯಾನಿ ತಿರುವಿಳ’ದಲ್ಲಿ 30 ಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ 20 ಕ್ಕೂ ಹೆಚ್ಚು ವಿಧದ ಬಿರಿಯಾನಿಗಳನ್ನು ಹೊಂದಿರುತ್ತದೆ, ಅವು ಗೋಮಾಂಸ ಮತ್ತು ಹಂದಿ ಬಿರಿಯಾನಿಗಳನ್ನು ಒಳಗೊಂಡಿರುವುದಿಲ್ಲ ಎಂದು ತಿರುಪತ್ತೂರು ಕಲೆಕ್ಟರ್ ಅಮರ್ ಕುಶ್ವಾಹಾ ಹೇಳಿದ್ದರಿಂದ ಈ  ಹಿಂದೆ ಗದ್ದಲ ಉಂಟಾಗಿತ್ತು. 

ಆಡಳಿತರೂಢ ಡಿಎಂಕೆ ಮಿತ್ರ ಪಕ್ಷವಾದ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಸೇರಿದಂತೆ ಮುಸ್ಲಿಂ ಮತ್ತು ದಲಿತ ಸಂಘಟನೆಗಳು ಈ ಕ್ರಮವನ್ನು ಟೀಕಿಸಿದವು, ಜಿಲ್ಲಾಧಿಕಾರಿಗಳು ಈ ಮಾಂಸಾಹಾರಕ್ಕೆ ಅವಕಾಶ ನೀಡದಿದ್ದಲ್ಲಿ ಉತ್ಸವ ನಡೆಯುವ ಸ್ಥಳದ ಎದುರಿನ ಜನರಿಗೆ ಉಚಿತವಾಗಿ ಗೋಮಾಂಸ  ವಿತರಿಸುವುದಾಗಿ ವಿಸಿಕೆ  ಮುಖಂಡರು ತಿಳಿಸಿದ್ದಾರೆ.

 ಬೀಫ್ ಬಿರಿಯಾನಿಯ ಮೇಲಿನ ನಿಷೇಧವನ್ನು ಎಸ್‌ಟಿ/ಎಸ್‌ಸಿ ಆಯೋಗವು ಎಸ್‌ಸಿ, ಎಸ್‌ಟಿ ಮತ್ತು ಮುಸ್ಲಿಮರ ಸಾಂಸ್ಕೃತಿಕ ಬಹಿಷ್ಕಾರವಾಗಿ ನೋಡಿದೆ.

ಮೇ 13 ಮತ್ತು 14 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿ ಅಂಬೂರ್ ಟ್ರೇಡ್ ಸೆಂಟರ್‌ನಲ್ಲಿ ನಡೆಯುತ್ತಿದ್ದ ಬಿರಿಯಾನಿ ಉತ್ಸವವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ತಿರುಪತ್ತೂರು ಜಿಲ್ಲಾಡಳಿತದ ಪತ್ರಿಕಾ ಪ್ರಕಟಣೆ ತಿಳಿಸಿದೆ. ಬಿರಿಯಾನಿ ಮೇಳವನ್ನು ಆಯೋಜಿಸಲಿರುವ ಸ್ಥಳವು ಒಳಾಂಗಣ ಸಭಾಂಗಣವಾಗಿದ್ದು, ಬೀಫ್‌ ಬಿರಿಯಾನಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮೇಳವನ್ನು ಬಹಿಷ್ಕರಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಮತ್ತೊಂದೆಡೆ, ಗೋಮಾಂಸ ಬಹಿಷ್ಕಾರವನ್ನು ಏಕೆ ತಾರತಮ್ಯ ಎಂದು ಪರಿಗಣಿಸಬಾರದು ಎಂದು ಸ್ಪಷ್ಟಪಡಿಸುವಂತೆ ತಮಿಳುನಾಡು ಎಸ್‌ಸಿ/ಎಸ್‌ಟಿ ಆಯೋಗವು ತಿರುಪತ್ತೂರು ಜಿಲ್ಲಾಧಿಕಾರಿಗೆ ನೋಟಿಸ್ ಕಳುಹಿಸಿದೆ.

ಜಿಲ್ಲಾಧಿಕಾರಿಗೆ ನೋಟಿಸ್ ಕಳುಹಿಸಿದ ರಾಜ್ಯ ಎಸ್ಸಿ/ಎಸ್ಟಿ ಆಯೋಗ

“ಪತ್ರಿಕಾ ಟಿಪ್ಪಣಿಯಲ್ಲಿ, ಬೀಫ್ ಬಿರಿಯಾನಿಯನ್ನು ಹಬ್ಬದಿಂದ ಹೊರಗಿಡಲಾಗುವುದು ಎಂದು ನೀವು ನಿರ್ದಿಷ್ಟವಾಗಿ ಹೇಳಿದ್ದೀರಿ. 2 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಎಸ್‌ಸಿ/ಎಸ್‌ಟಿ ಮತ್ತು ಮುಸ್ಲಿಂ ಜನಸಂಖ್ಯೆಯ ವಿರುದ್ಧ ತಾರತಮ್ಯವನ್ನು ಅಸ್ಪೃಶ್ಯತೆಯ ಆಚರಣೆ ಎಂದು ಪರಿಶೀಲಿಸಲು ಸಮಿತಿಯು ಆಯ್ಕೆ ಮಾಡಿದೆ.” ಎಂದು ತಿರುಪತ್ತೂರ್ ಜಿಲ್ಲಾಧಿಕಾರಿಗೆ ತಮಿಳುನಾಡು ಎಸ್‌ಸಿ/ಎಸ್‌ಟಿ ಆಯೋಗದ ನೋಟಿಸ್‌ ನೀಡಿದೆ

ಸಭಾಂಗಣದ ಹೊರಗೆ ವಿಡುತಲೈ ಚಿರುತೈಗಲ್ ಕಚ್ಚಿ ಮತ್ತು ಕೆಲವು ಮುಸ್ಲಿಂ ಪಕ್ಷಗಳು ಗೋಮಾಂಸ ಉಚಿತ ವಿತರಣೆ ಸೇರಿದಂತೆ ಪ್ರತಿಭಟನೆಗಳನ್ನು ಯೋಜಿಸಿದ್ದವು. ಇದೇ ಸಂದರ್ಭದಲ್ಲಿ, ಗೋಮಾಂಸ ಬಡಿಸುವುದು ದೇಶದ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಹೇಳಿರುವ ಹಿಂದೂ ಮುನ್ನಾನಿ ಎಂಬ ಸಂಘಟನೆಯು ಬಿರಿಯಾನಿ ಹಬ್ಬವನ್ನು ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. 

ಅಂಬೂರಿನ ವಿಸಿಕೆ ಮುಖಂಡ ಓಂ ಪ್ರಕಾಶ್ ಮಾತನಾಡಿ, ದನದ ಮಾಂಸವನ್ನು ಸೇರಿಸಲು ನಾವು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ ಆದರೆ ಅವರು ನಿರಾಕರಿಸಿದರು. ಈ ನಿರ್ಧಾರವನ್ನು ಹೋಟೆಲ್ ಮಾಲೀಕರು ಮತ್ತು ಮಾಂಸದ ವ್ಯಾಪಾರಿಗಳು ವಿರೋಧಿಸಲು ನಾವು ಒತ್ತಾಯಿಸಿದ್ದೇವೆ' ಎಂದು ಹೇಳಿದ್ದಾರೆ. ಅಂಬೂರು ನಗರದ ಹಿಂದೂ ಮುನ್ನಾನಿ ಅಧ್ಯಕ್ಷ ಜೆ.ಎಸ್.ಚಿದಂಬರಂ ಅವರು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ, 'ಕೆಲವರು ಬಿರಿಯಾನಿ ಹಬ್ಬಕ್ಕೆ ಗೋಮಾಂಸ ಸೇರಿಸಲು ಒತ್ತಾಯಿಸುತ್ತಿದ್ದಾರೆ, ಆದರೆ, ಇತರೆ ಮಾಂಸಗಳೊಂದಿಗೆ ಬೆರೆತು ನಾವು ಗೋಮಾಂಸ ತಿನ್ನಬಹುದಾದ ಸಾಧ್ಯತೆ ಇದೆ, ಹಾಗಾಗಿ, ಮೇಳದಲ್ಲಿ ಬೀಫ್‌ ಬಿರಿಯಾನಿಗೆ ಅವಕಾಶ ನೀಡಬಾರದೆಂದು ಮನವಿ ಮಾಡಿದೆ. 

“ಬೀಫ್‌ ಬಿರಿಯಾನಿ ನೀಡಿದರೆ, ಇನ್ನು ಕೆಲವು ಗುಂಪುಗಳಿಗೆ ಹಂದಿ ಬಿರಿಯಾನಿ ಬೇಕು. ಇದರಿಂದ ಅಂಬೂರಿನಲ್ಲಿ ಶಾಂತಿ ಕದಡುತ್ತದೆ. ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಧಾರ್ಮಿಕ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಮೇಳದ ಸಂದರ್ಭದಲ್ಲಿ ಗೋಮಾಂಸ ಮತ್ತು ಹಂದಿ ಮಾಂಸದ ಬಿರಿಯಾನಿಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ, ಅವುಗಳನ್ನು ಸೇವಿಸಲು ಬಯಸುವವರು ಹೊರಗಿನಿಂದ ಖರೀದಿಸಿ ತಿನ್ನಬಹುದು, ಯಾವುದೇ ನಿರ್ಬಂಧವಿಲ್ಲ” ಎಂದು ಅಂಬೂರ್ ಜಿಲ್ಲಾಧಿಕಾರಿ ಅಮರ್ ಕುಶ್ವಾಹ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News