×
Ad

ಬೈರ್‌ಸ್ಟೋವ್, ಲಿವಿಂಗ್‌ಸ್ಟೋನ್ ಅಬ್ಬರದ ಬ್ಯಾಟಿಂಗ್, ಪಂಜಾಬ್‌ಗೆ ಭರ್ಜರಿ ಜಯ

Update: 2022-05-13 23:35 IST
Photo:twitter

 ಮುಂಬೈ, ಮೇ 13: ಬೈರ್‌ಸ್ಟೋವ್ ಹಾಗೂ ಲಿವಿಂಗ್‌ಸ್ಟೋನ್ ಅಬ್ಬರದ ಬ್ಯಾಟಿಂಗ್, ಕಾಗಿಸೊ ರಬಾಡ(3-21)ನೇತೃತ್ವದ ಬೌಲರ್‌ಗಳ ಕರಾರುವಾಕ್ ಬೌಲಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 54 ರನ್‌ಗಳ ಅಂತರದಿಂದ ಗೆಲುವು ದಾಖಲಿಸಿದೆ.

ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಪಿಎಲ್‌ನ 60ನೇ ಪಂದ್ಯದಲ್ಲಿ ಗೆಲ್ಲಲು 210 ರನ್ ಗುರಿ ಬೆನ್ನಟ್ಟಿದ ಆರ್‌ಸಿಬಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪಂಜಾಬ್ ಪರ ರಿಷಿ ಧವನ್(2-36) ಹಾಗೂ ರಾಹುಲ್ ಚಹಾರ್(2-37) ತಲಾ ಎರಡು ವಿಕೆಟ್‌ಗಳನ್ನು ಪಡೆದು ಆರ್‌ಸಿಬಿಯನ್ನು ನಿಯಂತ್ರಿಸಲು ನೆರವಾದರು.

ಆರ್‌ಸಿಬಿ ಪರ ಮ್ಯಾಕ್ಸ್‌ವೆಲ್(35 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು. ರಜತ್ ಪಾಟಿದಾರ್(26 ರನ್), ವಿರಾಟ್‌ಕೊಹ್ಲಿ (20 ರನ್) ಎರಡಂಕೆಯ ಸ್ಕೋರ್ ಗಳಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡ ಅಗ್ರ ಸರದಿಯ ಬ್ಯಾಟರ್‌ಗಳಾದ ಜಾನಿ ಬೈರ್‌ಸ್ಟೋವ್(66 ರನ್, 29 ಎಸೆತ, 4 ಬೌಂಡರಿ, 7 ಸಿಕ್ಸರ್)ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್(70 ರನ್, 42 ಎಸೆತ, 5 ಬೌಂಡರಿ, 4 ಸಿಕ್ಸರ್)ಅಬ್ಬರದ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು.

   ಕೇವಲ 21 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದ ಬೈರ್‌ಸ್ಟೋವ್ ಪಂಜಾಬ್‌ಗೆ ಸ್ಫೋಟಕ ಆರಂಭ ಒದಗಿಸಿದರು. ಶಿಖರ್ ಧವನ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಬೈರ್ ಸ್ಟೋವ್ ಮೊದಲ ವಿಕೆಟ್‌ಗೆ 60 ರನ್ ಜೊತೆಯಾಟ ನಡೆಸಿದರು. ಧವನ್(21 ರನ್,15 ಎಸೆತ)ವಿಕೆಟನ್ನು ಉರುಳಿಸಿದ ಮ್ಯಾಕ್ಸ್‌ವೆಲ್ ಈ ಜೋಡಿಯನ್ನು ಬೇರ್ಪಡಿಸಿದರು. ಪಂಜಾಬ್ 1 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದ್ದು, ಇದು ಈ ಋತುವಿನಲ್ಲಿ ಪವರ್ ಪ್ಲೇ ವೇಳೆ ತಂಡವೊಂದರ ಉತ್ತಮ ಸಾಧನೆಯಾಗಿದೆ. ಬೈರ್‌ಸ್ಟೋವ್ ನೀಡಿದ ಉತ್ತಮ ಆರಂಭದ ಲಾಭ ಪಡೆದ ಲಿವಿಂಗ್‌ಸ್ಟೋನ್ ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಲಿವಿಂಗ್‌ಸ್ಟೋನ್ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಬೆಂಗಳೂರು ಬೌಲಿಂಗ್ ವಿಭಾಗದಲ್ಲಿ ಹರ್ಷಲ್ ಪಟೇಲ್ (4-34)ನಾಲ್ಕು ವಿಕೆಟ್‌ಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News