ಮಧ್ಯಪ್ರದೇಶ: ಕೃಷ್ಣಮೃಗ ಬೇಟೆಗಾರರ ಗುಂಡೇಟಿಗೆ ಮೂವರು ಪೊಲೀಸರು ಬಲಿ

Update: 2022-05-14 05:24 GMT
Photo: ndtv

ಗುನಾ: ಗುನಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಇಂದು ಮುಂಜಾನೆ ಕೃಷ್ಣಮೃಗ ಬೇಟೆಗಾರರ ಗುಂಡೇಟಿಗೆ ಮೂವರು ಪೊಲೀಸ್  ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.

ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ, ಪೊಲೀಸ್ ಮಹಾನಿರ್ದೇಶಕ ಸುಧೀರ್ ಸಕ್ಸೇನಾ ಹಾಗೂ  ಪೊಲೀಸ್ ಮತ್ತು ಗುನಾ ಜಿಲ್ಲೆಯ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮೋಟಾಕ್ ಸೈಕಲ್ ನಲ್ಲಿ ಬಂದಿದ್ದ ಬಂದೂಕುಧಾರಿ 7-8 ಬೇಟೆಗಾರರನ್ನು ಪೊಲೀಸರು ಸುತ್ತುವರಿದರು. ಬೇಟೆಗಾರರು ಪೊಲೀಸ್ ತಂಡದ ಮೇಲೆ  ಗುಂಡು ಹಾರಿಸಿದ್ದಾರೆ . ಪೊಲೀಸರು ಪ್ರತಿದಾಳಿ ನಡೆಸಿದರು.  ಆದರೆ ಬೇಟೆಗಾರರು ದಟ್ಟವಾದ ಅರಣ್ಯದಲ್ಲಿ  ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಗುನಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ಹೇಳಿದ್ದಾರೆ.

ದಾಳಿಯಲ್ಲಿ ಸಬ್ ಇನ್‌ಸ್ಪೆಕ್ಟರ್ ರಾಜ್‌ಕುಮಾರ್ ಜಾಟವ್, ಹೆಡ್ ಕಾನ್‌ಸ್ಟೆಬಲ್ ಸಂತ ಕುಮಾರ್ ಮಿನಾ ಹಾಗೂ ಕಾನ್‌ಸ್ಟೆಬಲ್ ನೀರಜ್ ಭಾರ್ಗವ್ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.  ಪೊಲೀಸ್ ವಾಹನದ ಚಾಲಕ ಕೂಡ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News