ಹವಾಮಾನ ಬದಲಾವಣೆಯಿಂದ 2030ರ ವೇಳೆಗೆ 9.06 ಕೋ. ಭಾರತೀಯರು ಹಸಿವೆಯಿಂದ ಬಳಲಲಿದ್ದಾರೆ: ವರದಿ

Update: 2022-05-14 14:15 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ,ಮೇ 14: ಕೃಷಿ ಉತ್ಪಾದನೆಯಲ್ಲಿ ಕುಸಿತ ಮತ್ತು ಆಹಾರ ಪೂರೈಕೆ ಸರಪಳಿಯಲ್ಲಿ ವ್ಯತ್ಯಯದಿಂದಾಗಿ ಹವಾಮಾನ ಬದಲಾವಣೆಯು 2030ರ ವೇಳೆಗೆ ಸುಮಾರು ಶೇ.23ರಷ್ಟು ಅಧಿಕ ಭಾರತೀಯರನ್ನು ಹಸಿವೆಯ ಅಪಾಯಕ್ಕೆ ತಳ್ಳಲಿದೆ ಎಂದು ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯು ಬಿಡುಗಡೆಗೊಳಿಸಿದ ಅಧ್ಯಯನ ವರದಿಯು ತಿಳಿಸಿದೆ ಎಂದು scroll.in ವರದಿ ಮಾಡಿದೆ.

ಹವಾಮಾನ ಬದಲಾವಣೆಯಿಲ್ಲದೆ 2030ರ ವೇಳೆಗೆ 7.39 ಕೋ.ಭಾರತೀಯರು ಬಳಲಲಿದ್ದಾರೆ ಎಂದು ಜಾಗತಿಕ ಆಹಾರ ನೀತಿ ವರದಿ 2022 ಬೆಟ್ಟು ಮಾಡಿತ್ತು. ಆದರೆ ಹವಾಮಾನ ಬದಲಾವಣೆಯನ್ನು ಪರಿಗಣನೆಗೆ ತೆಗೆದುಕೊಂಡರೆ 9.06 ಕೋ.ಭಾರತೀಯರು (ಶೇ.22.69ರಷ್ಟು ಅಧಿಕ) ಹಸಿವಿನ ಅಪಾಯಕ್ಕೆ ಸಿಲುಕಲಿದ್ದಾರೆ ಎನ್ನುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

2030ರ ವೇಳೆಗೆ ಕೃಷಿ ಇಳುವರಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮದಿಂದಾಗಿ ಭಾರತದ ಒಟ್ಟು ಆಹಾರ ಉತ್ಪಾದನೆ ಸೂಚ್ಯಂಕವು ಸಾಮಾನ್ಯ ಸಂದರ್ಭಗಳಲ್ಲಿಯ 1.627ರಿಂದ 1.549ಕ್ಕೆ ಕುಸಿಯಲಿದೆ ಎಂದೂ ವರದಿಯು ಭವಿಷ್ಯ ನುಡಿದಿದೆ.

ಹೆಚ್ಚಿನ ತಾಪಮಾನಗಳು, ಬದಲಾಗುತ್ತಿರುವ ಮಳೆಯ ಸ್ವರೂಪಗಳು, ಸಮುದ್ರ ಮಟ್ಟ ಏರಿಕೆ ಹಾಗೂ ಬರ,ನೆರೆ,ಅತಿಯಾದ ಉಷ್ಣತೆ ಮತ್ತು ಚಂಡಮಾರುತಗಳಂತಹ ಪ್ರತಿಕೂಲ ಹವಾಮಾನ ಘಟನೆಗಳ ಹೆಚ್ಚುತ್ತಿರುವ ಆವರ್ತನ ಮತ್ತು ತೀವ್ರತೆ ಈಗಾಗಲೇ ಕೃಷಿ ಉತ್ಪಾದಕತೆಯನ್ನು ಕುಂಠಿತಗೊಳಿಸುತ್ತಿವೆ, ಆಹಾರ ಪೂರೈಕೆ ಸರಪಳಿಯನ್ನು ವ್ಯತ್ಯಯಗೊಳಿಸುತ್ತಿವೆ ಮತ್ತು ಸಮುದಾಯಗಳು ಸ್ಥಳಾಂತರಗೊಳ್ಳುವಂತೆ ಮಾಡುತ್ತಿವೆ ಎಂದು ವರದಿಯು ಹೇಳಿದೆ.

2100ರ ವೇಳೆಗೆ ಭಾರತದಾದ್ಯಂತ ಸರಾಸರಿ ತಾಪಮಾನವು 2.4 ಡಿ.ಸೆಲ್ಶಿಯಸ್ನಿಂದ 4.4 ಡಿ.ಸೆಲ್ಶಿಯಸ್ವರೆಗೆ ಹೆಚ್ಚಲಿದೆ ಮತ್ತು ಬೇಸಿಗೆಯಲ್ಲಿ ಉಷ್ಣ ಮಾರುತಗಳು ಆ ವೇಳೆಗೆ ಮೂರು ಪಟ್ಟು ಅಧಿಕವಾಗಲಿವೆ ಎಂದು ವರದಿಯು ಅಂದಾಜಿಸಿದೆ.

2010ರಲ್ಲಿಯ ಮಟ್ಟಗಳಿಗೆ ಹೋಲಿಸಿದರೆ 2050ರಲ್ಲಿ ಜಾಗತಿಕ ಆಹಾರ ಉತ್ಪಾದನೆಯು ಸುಮಾರು ಶೇ.60ರಷ್ಟು ಹೆಚ್ಚಾಗಲಿದೆ. ಆದಾಗ್ಯೂ ಆಹಾರದ ಲಭ್ಯತೆಯಲ್ಲಿನ ಪ್ರಾದೇಶಿಕ ವ್ಯತ್ಯಾಸಗಳಿಂದಾಗಿ ಆಗಲೂ ಸುಮಾರು 50 ಕೋ.ಜನರು ಹಸಿವಿನ ಸುಳಿಗೆ ಸಿಲುಕುವ ಅಪಾಯದಲ್ಲಿರಲಿದ್ದಾರೆ. ಹವಾಮಾನ ಬದಲಾವಣೆಯಿಲ್ಲದಿದ್ದರೆ ಈ ಸಂಖ್ಯೆ ಏಳು ಕೋ.ಕಡಿಮೆಯಾಗಬಹುದಿತ್ತು ಎಂದು ಸಂಶೋಧಕರು ವರದಿಯಲ್ಲಿ ಹೇಳಿದ್ದಾರೆ.

ವಿಶ್ವಾದ್ಯಂತ ಪ್ರತಿ ವರ್ಷ 620 ಶತಕೋಟಿ ಡಾ.ಗಳು (48 ಲ.ಕೋ.ರೂ.ಗೂ ಹೆಚ್ಚು)ಸರಕಾರಿ ಸಹಾಯಧನಗಳ ರೂಪದಲ್ಲಿ ಕೃಷಿ ಕ್ಷೇತ್ರಕ್ಕೆ ವರ್ಗಾವಣೆಗೊಳ್ಳುತ್ತವೆ ಮತ್ತು ಈ ಪೈಕಿ ಅರ್ಧದಷ್ಟು ಮೊತ್ತವನ್ನು ಕೇವಲ ಚೀನಾ,ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ವೆಚ್ಚ ಮಾಡುತ್ತವೆ. ಈ ಅಂತರವನ್ನು ನಿವಾರಿಸಲು ಕೃಷಿ ಕ್ಷೇತ್ರದಲ್ಲಿ ಸಂಶೋಧನೆ,ಅಭಿವೃದ್ಧಿ ಮತ್ತು ಹೊಸತನಗಳಿಗಾಗಿ ಸೂಕ್ತ ಹಣಕಾಸು ದೊರೆಯುವಂತೆ ಕೃಷಿ ಸಹಾಯಧನಗಳ ಉದ್ದೇಶವನ್ನು ತಕ್ಷಣ ಮರುಪರಿಶೀಲಿಸುವ ಅಗತ್ಯವಿದೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News