ದಿಲ್ಲಿ ಅಗ್ನಿ ದುರಂತ 29 ಮಂದಿ ನಾಪತ್ತೆ, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ

Update: 2022-05-14 16:52 GMT
Photo: PTI

ಹೊಸದಿಲ್ಲಿ, ಮೇ 14: ದಿಲ್ಲಿಯ ಹೊರವಲಯದ ಮುಂಡ್ಕಾದಲ್ಲಿರುವ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 27 ಮಂದಿ ಸಾವನ್ನಪ್ಪಿದ ಒಂದು ದಿನದ ಬಳಿಕ ಪೊಲೀಸರು, ಘಟನೆಯಲ್ಲಿ 29 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ. ಆದುದರಿಂದ ಭಾವೋದ್ರಿಕ್ತರಾದ ಸಂಬಂಧಿಕರು ತಮ್ಮ ಪ್ರೀತಿಪಾತ್ರರಿಗಾಗಿ ಈಗಲೂ ಶೋಧ ಕಾರ್ಯ ನಡೆಸುತ್ತಿದ್ದಾರೆ. ಶನಿವಾರ ಬೆಳಗ್ಗೆ ಕಟ್ಟಡದಲ್ಲಿ ಕಾರ್ಯಾಚರಣೆ ಸಂದರ್ಭ ಸುಟ್ಟು ಕರಕಲಾದ ಮೃತದೇಹಗಳ ಅವಶೇಷಗಳು ಪತ್ತೆಯಾಗಿರುವುದರಿಂದ ಸಾವನ್ನಪ್ಪಿದವರ ಸಂಖ್ಯೆ 30ಕ್ಕೆ ಏರಿಕೆಯಾಗಬಹುದು ಎಂದು ಅಗ್ನಿಶಾಮಕ ದಳ ತಿಳಿಸಿದೆ. ಗಾಯಗೊಂಡ 12 ಮಂದಿ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಗ್ನಿ ಸುರಕ್ಷಾ ಪ್ರಮಾಣ ಪತ್ರ ಹೊಂದಿರದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಕೇವಲ ಒಂದು ಪ್ರವೇಶ ಹಾಗೂ ಒಂದು ನಿರ್ಗಮನ ಇತ್ತು. ಇದು ಹೆಚ್ಚಿನ ಸಂಖ್ಯೆಯ ಸಾವು-ನೋವುಗಳಿಗೆ ಕಾರಣವಾಗಿರಬಹುದು ಎಂದು ಅವರು ತಿಳಿಸಿದ್ದಾರೆ. ಕಟ್ಟಡದಲ್ಲಿ ಪಾರಾಗಲು ಏಕೈಕ ದಾರಿ ಮಾತ್ರ ಇತ್ತು. ಆದುದರಿಂದ ಸಾವು-ನೋವುಗಳ ಸಂಖ್ಯೆ ಹೆಚ್ಚಾಗಲು ಇದು ಕಾರಣ ಇರಬಹುದು. 27 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಗ್ನಿ ಶಾಮಕ ದಳದ ಮುಖ್ಯ ಅಧಿಕಾರಿ ಅತುಲ್ ಗರ್ಗ್ ಹೇಳಿದ್ದಾರೆ. ಪ್ರವೇಶ ಹಾಗೂ ನಿರ್ಗಮಕ್ಕಾಗಿ ಕೇವಲ ಒಂದು ಕಿರಿದಾದ ಮೆಟ್ಟಿಲು ಮಾತ್ರ ಇದ್ದುದರಿಂದ ಉರಿಯುತ್ತಿರುವ ಕಟ್ಟಡದಿಂದ ಪಾರಾಗುವುದು ಕಷ್ಟಕರವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎ.ಸಿ.ಯಲ್ಲಿ ಸಂಭವಿಸಿದ ಸ್ಫೋಟ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿರಬಹುದು ಎಂದು ಗರ್ಗ್ ಶಂಕಿಸಿದ್ದಾರೆ. ಹರೀಶ್ ಗೋಯೆಲ್ ಹಾಗೂ ಅವರ ಸಹೋದರ ವರುಣ್ ಗೋಯೆಲ್ ಸಿಸಿಟಿವಿ ಕ್ಯಾಮೆರಾ, ರೂಟರ್ ತಯಾರಿಕೆ ಮತ್ತು ಜೋಡಿಸುವ ಕಂಪೆನಿಯ ಮಾಲಕರಾಗಿದ್ದು, ಅವರ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಶಂಕಿಸಲಾಗಿದೆ ಎಂದು ಉಪ ಪೊಲೀಸ್ (ಬಾಹ್ಯಾ)ಆಯುಕ್ತ ಸಮೀರ್ ಶರ್ಮಾ ಅವರು ಹೇಳಿದ್ದಾರೆ. ಶನಿವಾರ ಬೆಳಗ್ಗೆ ಪತ್ತೆಯಾದ ಮೃತದೇಹಗಳ ಅವಶೇಷಗಳು ಒಬ್ಬರದ್ದೊ ಅಥವಾ ಹಲವರದ್ದೊ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಕಷ್ಟಕರ ಎಂದು ಗರ್ಗ್ ತಿಳಿಸಿದ್ದಾರೆ. ಮೃತಪಟ್ಟ 27 ಮಂದಿಯಲ್ಲಿ 7 ಮಂದಿಯನ್ನು ಗುರುತಿಸಲಾಗಿದೆ. ಅವರು ತಾನಿಯಾ ಭೂಷಣ್, ಮೋಹಿನಿ ಪಾಲ್, ಯಶೋದಾ ದೇವಿ, ರಂಜು ದೇವಿ, ವಿಶಾಲ್, ದೃಷ್ಟಿ ಹಾಗೂ ಕೈಲಾಸ್ ಜ್ಯಾನಿ ಎಂದು ಗುರುತಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಘಟನಾ ಸ್ಥಳಕ್ಕೆ ಶನಿವಾರ ಭೇಟ ನೀಡಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೃತಪಟ್ಟ ಕುಟುಂಬದ ಸದಸ್ಯರಿಗೆ ತಲಾ 10 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News