ರಾಜ್ಯದಿಂದ ಪ್ರಿಯಾಂಕ ಗಾಂಧಿ ಸ್ಪರ್ಧೆಗೆ ಸ್ವಾಗತ: ಶೋಭಾ ಕರಂದ್ಲಾಜೆ

Update: 2022-05-14 16:59 GMT

ಉಡುಪಿ : ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಿಂದ ಕಾಂಗ್ರೆಸ್‌ನಿಂದ ಪ್ರಿಯಾಂಕ ಗಾಂಧಿ ಸ್ಪರ್ಧಿಸಲು ಬಯಸಿದರೆ ಸ್ವಾಗತಿಸುತ್ತೇನೆ ಎಂದು  ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಶನಿವಾರ ಕುಕ್ಕಿಕಟ್ಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶೋಭಾ ಕರಂದ್ಲಾಜೆ, ಪ್ರಿಯಾಂಕ ಗಾಂಧಿ ಸೇರಿದಂತೆ ಯಾರೂ ಕೂಡಾ ಇಲ್ಲಿಂದ ಸ್ಪರ್ಧಿಸಬಹುದು. ಈಗಾಗಲೇ ಅಜ್ಜಿ ಇಂದಿರಾಗಾಂಧಿ ಹಾಗೂ ತಾಯಿ ಸೋನಿಯಾ ಗಾಂಧಿ ಇಲ್ಲಿಂದ ಸ್ಪರ್ಧಿಸಿದ್ದಾರೆ. ಹೀಗಾಗಿ ಮೊಮ್ಮಗಳು ಸ್ಪರ್ಧಿಸಿದರೂ ಸ್ವಾಗತ. ಈ ಮೂಲಕ ಈಗಾಗಲೇ ರಾಜ್ಯದಲ್ಲಿ ನೆಲಕಚ್ಚಿರುವ ಕಾಂಗ್ರೆಸ್‌ನ್ನು ಮೇಲೆತ್ತಲು ಸಾಧ್ಯವಾಗಬಹುದು ಎಂದರು.

ಸಂವಿಧಾನ, ಕಾನೂನು ಪಾಲಿಸದೆ, ಕೋರ್ಟು ತೀರ್ಪನ್ನೇ ಉಲ್ಲಂಘಿಸುವವರು ಸಮಾಜದ ಜನತೆಗೆ ಸೌಹಾರ್ದ, ಸಾಮರಸ್ಯದ ಪಾಠ ಹೇಳಲು ಹೊರಟಿದ್ದಾರೆ ಎಂದು ಉಡುಪಿಯಲ್ಲಿಂದು ನಡೆದಿರುವ ಸಹಬಾಳ್ವೆ ಸಮಾವೇಶದ ಬಗ್ಗೆ ಹೇಳಿದರು.

ಉಡುಪಿಯಲ್ಲಿ ಸಾಮರಸ್ಯ ನಡಿಗೆ, ಸಹಬಾಳ್ವೆ ಸಮಾವೇಶ ನಡೆಸುತ್ತಿರುವುದು ಯಾರಿಗಾಗಿ ? ಬಹುಸಂಖ್ಯಾತರು ಶಾಂತಿಪ್ರಿಯರಾಗಿ ಬದುಕುತ್ತಿದ್ದರೆ ಎಲ್ಲವನ್ನೂ ಗಾಳಿಗೆ ತೂರುವವರು ನೀತಿ ಬೋಧನೆಗೆ ಹೊರಟಿದ್ದಾರೆ ಎಂದು ಟೀಕಿಸಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದಕ್ಷತೆಯಿಂದ ಹಣಕಾಸು ಸಂಗ್ರಹಿಸಿ ದೇಶದ ಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದಾರೆ. ಹೆಣ್ಮಕ್ಕಳು, ಮಹಿಳೆಯರಿಗೆ ಅವರು ಮಾದರಿಯಾಗಿದ್ದಾರೆ. ಸ್ವಾಭಿಮಾನಿಯಾಗಿರುವ ಅವರನ್ನು ರಾಜ್ಯದಿಂದಲೇ ರಾಜ್ಯಸಭೆಗೆ ಸ್ಪರ್ಧಿಸಲು ಆಹ್ವಾನಿಸಲಾಗುವುದು ಎಂದರು.

ಆ್ಯಸಿಡ್ ದಾಳಿ ಮಾಡುವ ವ್ಯಕ್ತಿಗಳಿಗೆ ಕೊಲೆ, ಅತ್ಯಾಚಾರಿಗಳಿಗೆ ವಿಧಿಸುವಷ್ಟೇ ಕಠಿಣ ಶಿಕ್ಷೆಯಾಗಬೇಕು. ವಿಕೃತ  ಮಾನಸಿಕತೆ ನಿಯಂತ್ರಿಸಲು ಕೃತ್ಯವೆಸಗದಂತೆ ಭಯ ಹುಟ್ಟಬೇಕು ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News