ನಕಲಿ ಹಿಂದುತ್ವ ಪಕ್ಷ ದೇಶದ ದಿಕ್ಕುತಪ್ಪಿಸುತ್ತಿದೆ: ಬಿಜೆಪಿ ವಿರುದ್ಧ ಹರಿಹಾಯ್ದ ಉದ್ಧವ್ ಠಾಕ್ರೆ

Update: 2022-05-15 03:26 GMT
ಉದ್ಧವ್ ಠಾಕ್ರೆ (File Photo: PTI)

ಹೊಸದಿಲ್ಲಿ: ನಕಲಿ ಹಿಂದುತ್ವ ಪಕ್ಷ ದೇಶದ ದಿಕ್ಕು ತಪ್ಪಿಸುತ್ತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಮೇಲೆ ಹರಿಹಾಯ್ದ ಅವರು, "ನಕಲಿ ಹಿಂದುತ್ವ ಪಕ್ಷ ಇಡೀ ದೇಶವನ್ನೇ ದಿಕ್ಕು ತಪ್ಪಿಸುತ್ತಿದೆ. ದೇವೇಂದ್ರ ಫಡ್ನವೀಸ್ ಬಿಜೆಪಿಯ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ನಿಮ್ಮನ್ನು ಹೊರಗಟ್ಟಿದ್ದೇವೆ. ಅವರು ತಾವೇ ಹಿಂದುತ್ವದ ಸಂರಕ್ಷಕರು ಎಂದು ಭಾವಿಸಿಕೊಂಡಿದ್ದಾರೆ. ಇಲ್ಲಿರುವ ಜನ ಏನು? ಅವರು ಯಾರು?" ಎಂದು ಬಂದ್ರಾ ಕುರ್ಲಾ ಕಾಂಪ್ಲೆಕ್ಸ್‍ನಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಪ್ರಶ್ನಿಸಿದರು.

ಶಿವಸೇನೆ ಬಾಳ್ ಠಾಕ್ರೆಯವರ ಆದರ್ಶದಿಂದ ವಿಮುಖವಾಗಿದೆ ಎಂದು ಬಿಂಬಿಸುವ ಹಲವು ಪ್ರಯತ್ನಗಳು ನಡೆದಿವೆ. ಆದರೆ ಪಕ್ಷದ ಸಂಸ್ಥಾಪಕರಾದ ಠಾಕ್ರೆಯವರ ಹೆಜ್ಜೆಯಲ್ಲೇ ಪಕ್ಷ ಮುಂದುವರಿಯುತ್ತಿದೆ ಎಂದು ನಿರಂತರವಾಗಿ ಶಿವಸೇನೆ ಪ್ರತಿಪಾದಿಸುತ್ತಾ ಬಂದಿದೆ ಎಂದು ndtv.com ವರದಿ ಮಾಡಿದೆ.

"ನಿಮ್ಮ ಮಾತೃಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಎಂದೂ ಸ್ವಾತಂತ್ರ್ಯ ಹೋರಾಟದ ಭಾಗವಾಗಿರಲಿಲ್ಲ. ನನ್ನ ಅಜ್ಜ ರಚಿಸಿದ ಸಂಯುಕ್ತ ಮಹಾರಾಷ್ಟ್ರ ಚಳವಳಿಗೆ ನಮ್ಮ ತಂದೆ ಹಾಗೂ ಅವರ ಸಹೋದರ ಶ್ರೀಕಾಂತ್ ನೆರವು ನೀಡಿದರು. ಆದರೆ ಅವರನ್ನು ಹೊರಗಟ್ಟಿದವರು ಯಾರು ಎಂದು ನಿಮಗೆ ಗೊತ್ತು. ಭಾರತೀಯ ಜನಸಂಘ" ಎಂದು ಸಿಎಂ ಹೇಳಿದರು.

"ನಮ್ಮ ಸಹನೆಯನ್ನು ದೌರ್ಬಲ್ಯ ಎಂದು ಪರಿಗಣಿಸಬೇಡಿ. ಪ್ರಣಯದ್ರೋಹಿ ಪ್ರೇಮಿಗಳಿಂದ ಆ್ಯಸಿಡ್ ದಾಳಿಗಳನ್ನು ನಾವು ಕೇಳಿದ್ದೇವೆ. ಬಿಜೆಪಿ ಹಾಗೆ ವರ್ತಿಸುತ್ತಿದೆ. ಅವರು ಮಹಾರಾಷ್ಟ್ರದ ಮಾನಹಾನಿ ಮಾಡುತ್ತಿದ್ದಾರೆ" ಎಂದು ಠಾಕ್ರೆ ನುಡಿದರು.

"ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಸರ್ಕಾರಿ ಕಚೇರಿಯಲ್ಲೇ ಹತ್ಯೆಯಾದರು. ಉಗ್ರಗಾಮಿಗಳು ಬಂದು ಅವರನ್ನು ಕೊಂದರು. ನೀವು ಅಲ್ಲಿ ಹನುಮಾನ್ ಚಾಲೀಸ್ ಪಠಿಸುತ್ತೀರಾ?" ಎಂದು ವ್ಯಂಗ್ಯವಾಡಿದರು.

ವಿರುದ್ಧ ಸಿದ್ಧಾಂತದ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡ ಶಿವಸೇನೆಯನ್ನು ಟೀಕಿಸಿದ ಬಿಜೆಪಿಗೆ ತಿರುಗೇಟು ನೀಡಿದ ಅವರು, ಬೋಗಸ್ ಹಿಂದುತ್ವದ ಬಿಜೆಪಿ ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ ಜತೆ ಮೈತ್ರಿ ಮಾಡಿಕೊಂಡಿತ್ತು ಎಂದು ಹೇಳಿದರು. "ದಾವೂದ್ ಇಬ್ರಾಹಿಂ ಬಿಜೆಪಿ ಸೇರುತ್ತೇನೆ ಎಂದರೆ ಆತ ಕೂಡಾ ಸಚಿವ ಆಗಬಹುದು" ಎಂದು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News