ಆರು ವರ್ಷಗಳಲ್ಲಿ 72,000 ಗ್ರೂಪ್ ಸಿ, ಡಿ ಉದ್ಯೋಗಗಳನ್ನು ರದ್ದುಗೊಳಿಸಿದ ರೈಲ್ವೇ
ಹೊಸದಿಲ್ಲಿ: ಭಾರತೀಯ ರೈಲ್ವೇಯು ಕಳೆದ ಆರು ವರ್ಷಗಳಲ್ಲಿ ಗ್ರೂಪ್-ಸಿ ಹಾಗೂ ಗ್ರೂಪ್-ಡಿ ವರ್ಗಗಳ ಸುಮಾರು 72,000 ಹುದ್ದೆಗಳನ್ನು ರದ್ದುಗೊಳಿಸಿದೆ. ಇದರಲ್ಲಿ ಕಾರಕೂನ , ಪರಿಚಾರಕ, ಸ್ವಚ್ಛತಾ ಕಾರ್ಮಿಕರು, ತೋಟದ ಮಾಲಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರು ಸೇರಿದ್ದಾರೆ.
ಅಧಿಕೃತ ದಾಖಲೆಗಳ ಪ್ರಕಾರ, ರೈಲ್ವೆಯ 16 ವಲಯಗಳು 2015-16 ರಿಂದ 2020-21 ರವರೆಗೆ ಗ್ರೂಪ್ ಸಿ ಹಾಗೂ ಡಿ ವರ್ಗಗಳಿಗೆ ಅಂತಹ 81,000 ಹುದ್ದೆಗಳನ್ನು ಬಿಟ್ಟುಕೊಡಲು ಪ್ರಸ್ತಾಪಿಸಿದ್ದವು.
ಈ ಹುದ್ದೆಗಳು ಅನಿವಾರ್ಯವಲ್ಲ ಹಾಗೂ ಕೆಲಸದ ಸಂಸ್ಕೃತಿ ಮತ್ತು ತಂತ್ರಜ್ಞಾನದ ಅಳವಡಿಕೆಯಲ್ಲಿನ ಬದಲಾವಣೆಯನ್ನು ಪರಿಗಣಿಸಿ ಇವುಗಳಿಗೆ ಹೆಚ್ಚು ಪ್ರಸಕ್ತತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದುವರೆಗೆ 56,888 ಅಂತಹ ಹುದ್ದೆಗಳನ್ನು ವಲಯ ರೈಲ್ವೇ ಸರೆಂಡರ್ ಮಾಡಿದ್ದು, ಉಳಿದ 15,495 ಹುದ್ದೆಗಳನ್ನು ಸರೆಂಡರ್ ಮಾಡಲು ನಿರ್ಧರಿಸಲಾಗಿದೆ.
ಉತ್ತರ ರೈಲ್ವೆಯು 9,000 ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಸರೆಂಡರ್ ಮಾಡಿದ್ದರೆ, ಆಗ್ನೇಯ ರೈಲ್ವೆಯಲ್ಲಿ 4,677 ಪೋಸ್ಟ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಡೇಟಾ ತೋರಿಸುತ್ತದೆ.
ದಕ್ಷಿಣ ರೈಲ್ವೆಯು 7,524 ಪೋಸ್ಟ್‌ಗಳನ್ನು ಹಾಗೂ ಪೂರ್ವ ರೈಲ್ವೆಯಲ್ಲಿ 5,700 ಕ್ಕಿಂತ ಹೆಚ್ಚು ಹುದ್ದೆಗಳನ್ನು ಸರೆಂಡರ್ ಮಾಡಿದೆ.
ರೈಲ್ವೆ ಮಂಡಳಿಯ ಅನುಮೋದನೆಯ ನಂತರ ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಇನ್ನೂ 9,000-10,000 ಅಂತಹ ಪೋಸ್ಟ್‌ಗಳನ್ನು ರದ್ದುಪಡಿಸಬಹುದು ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಅಂತಹ ಹುದ್ದೆಗಳನ್ನು ಹೊಂದಿರುವ ನೌಕರರು ವಿವಿಧ ಇಲಾಖೆಗಳಲ್ಲಿ ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.