ಜ್ಞಾನವಾಪಿ ಮಸೀದಿ: ವಿವಾದಕ್ಕೆ ಈಗ ಯಾಕೆ ಮರುಜೀವ ನೀಡಲಾಗುತ್ತಿದೆ?

Update: 2022-05-15 05:53 GMT

ಮುಸ್ಲಿಮ್ ದೊರೆಗಳು ಹಿಂದೂ ದೇವಾಲಯಗಳನ್ನು ಕೆಡವಿದರು ಎನ್ನುವುದು ಸತ್ಯದ ಒಂದು ಭಾಗ ಮಾತ್ರವಾಗಿದೆ. ಅದು ಆಯ್ದು ತೆಗೆದ ಇತಿಹಾಸವಾಗಿದೆ. ಹಿಂದೂ ರಾಜರು ಸಂಪತ್ತಿಗಾಗಿ ದೇವಸ್ಥಾನಗಳನ್ನು ಕೆಡವಿದರು ಎನ್ನುವುದನ್ನೂ ಇತಿಹಾಸದ ಇನ್ನೊಂದು ಮಗ್ಗಲು ತೋರಿಸುತ್ತದೆ (11ನೇ ಶತಮಾನದಲ್ಲಿ ಕಾಶ್ಮೀರದ ರಾಜ ಹರ್ಷದೇವ್). ಮರಾಠರು ಟಿಪ್ಪು ಸುಲ್ತಾನ್ ಜೊತೆಗೆ ರಾಜಕೀಯ ಶತ್ರುತ್ವ ಹೊಂದಿದ್ದರು. ಹಾಗಾಗಿ, ಮರಾಠಾ ಸೇನೆಗಳು ಮೈಸೂರಿನಲ್ಲಿರುವ ಶ್ರೀರಂಗಪಟ್ಟಣ ದೇವಾಲಯವನ್ನು ಧ್ವಂಸಗೊಳಿಸಿದ್ದವು.ಮುಸ್ಲಿಮ್ ದೊರೆಗಳು ಧಾರ್ಮಿಕ ಕಾರಣಗಳಿಗಾಗಿ ದೇವಸ್ಥಾನಗಳನ್ನು ನಾಶಪಡಿಸಿದರು ಎಂಬ ಮನೋಭಾವ ಸರಿಯಿಲ್ಲ.

ಜ್ಞಾನವಾಪಿ ಮಸೀದಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಶೃಂಗಾರ ಗೌರಿ, ಹನುಮಾನ್ ಮತ್ತು ಗಣೇಶ ಚಿತ್ರಗಳಿಗೆ ಪ್ರತಿ ದಿನ ಪೂಜೆ ಮಾಡಲು ಅನುಮತಿ ಕೋರಿ ರಾಖಿ ಸಿಂಗ್ ಮತ್ತು ಇತರರು ಅರ್ಜಿ ಸಲ್ಲಿಸಿದ್ದಾರೆ.

ಜ್ಞಾನವಾಪಿ ಮಸೀದಿಯ ಹೊರ ಗೋಡೆಯಲ್ಲಿ ಶೃಂಗಾರ ಗೌರಿಯ ಚಿತ್ರವಿದೆ. ಬಾಬರಿ ಮಸೀದಿ ಧ್ವಂಸದ ಬಳಿಕ, ಆ ಸ್ಥಳಕ್ಕೆ ಭಕ್ತರ ದೈನಂದಿನ ಭೇಟಿಯನ್ನು ನಿಲ್ಲಿಸಲಾಯಿತು. ಅಲ್ಲಿನ ಭದ್ರತೆಯನ್ನು ಹೆಚ್ಚಿಸಲಾಯಿತು. ಚೈತ್ರ ನವರಾತ್ರದ ನಾಲ್ಕನೇ ದಿನದಂದು ಮಾತ್ರ ದೇವಿಯ ಪೂಜೆಗೆ ಅವಕಾಶ ನೀಡಲಾಯಿತು.

ಎಪ್ರಿಲ್ 26ರಂದು ವಾರಣಾಸಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಆದೇಶವೊಂದನ್ನು ನೀಡಿ, ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶೃಂಗಾರ ಗೌರಿ ದೇವಾಲಯ ಮತ್ತು ಇತರ ಸ್ಥಳಗಳ ವೀಡಿಯೊ ಚಿತ್ರೀಕರಣ ಮಾಡುವಂತೆ ಅಡ್ವಕೇಟ್ ಕಮಿಶನರ್‌ಗೆ ಸೂಚಿಸಿದರು. ಬಾಬರಿ ಮಸೀದಿಯನ್ನು ಹೊರತುಪಡಿಸಿ, ಎಲ್ಲ ಆರಾಧನಾಲಯಗಳು 1947ರ ಆಗಸ್ಟ್‌ನಲ್ಲಿ ಹೇಗಿದ್ದವೋ ಮುಂದೆಯೂ ಅದೇ ರೀತಿಯಲ್ಲಿರಬೇಕು ಎಂದು ಹೇಳುವ ಕಾನೂನನ್ನು 1991ರಲ್ಲಿ ಸಂಸತ್ತು ಅಂಗೀಕರಿಸಿತ್ತು. ಆರಾಧನಾಲಯಗಳು ಹಿಂದೆ ಹೇಗಿದ್ದವೋ ಅದೇ ರೀತಿ ಇರುತ್ತವೆ ಎನ್ನುವುದಾದರೆ, ಈ ವೀಡಿಯೊ ಚಿತ್ರೀಕರಣ ಏಕೆ? ಈ ಕಾನೂನನ್ನು ಮಾನ್ಯ ನ್ಯಾಯಾಧೀಶರು ಮರೆತಿದ್ದಾರೆ ಎಂದು ಕಾಣುತ್ತದೆ!

ಕಾಶಿ (ಉತ್ತರಪ್ರದೇಶದಲ್ಲಿ ಇದನ್ನು ವಾರಣಾಸಿ ಎಂಬುದಾಗಿ ಕರೆಯಲಾಗುತ್ತದೆ)ಯ ವಿಶ್ವನಾಥ ದೇವರ ಜ್ಯೋತಿರ್ಲಿಂಗವು ಜ್ಞಾನವಾಪಿ ಮಸೀದಿಯ ಆವರಣದಲ್ಲಿದೆ ಎಂದು ಹೇಳುವ ಇನ್ನೊಂದು ಅರ್ಜಿಯೂ ನ್ಯಾಯಾಲಯದಲ್ಲಿದೆ. 1669ರಲ್ಲಿ ಮೊಗಲ್ ದೊರೆ ಔರಂಗಜೇಬ್ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಕೆಡವಿ ಜ್ಞಾನವಾಪಿ ಮಸೀದಿ ಎಂಬ ಹೆಸರಿನ ಮಸೀದಿಯೊಂದನ್ನು ನಿರ್ಮಿಸಿದನು ಎಂಬುದಾಗಿಯೂ ಅರ್ಜಿದಾರರು ಹೇಳಿದ್ದಾರೆ. ಜ್ಞಾನವಾಪಿ ಮಸೀದಿ ಸ್ಥಳವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಮುಸ್ಲಿಮರಿಗೆ ಯಾವುದೇ ಹಕ್ಕಿಲ್ಲ ಎಂಬುದಾಗಿ ನ್ಯಾಯಾಲಯ ಘೋಷಿಸಬೇಕು ಮತ್ತು ಅಲ್ಲಿಗೆ ಮುಸ್ಲಿಮರ ಪ್ರವೇಶವನ್ನು ನಿಷೇಧಿಸಬೇಕು ಎಂಬುದಾಗಿಯೂ ಅವರು ಬಯಸಿದ್ದಾರೆ.

ಇಡೀ ವಿಷಯವು ಮಧ್ಯ ಯುಗದ ಇತಿಹಾಸವನ್ನು ಕೋಮುವಾದಿ ರೂಪದಲ್ಲಿ ಬಿತ್ತರಿಸುತ್ತಿದೆ. ಔರಂಗಜೇಬನು ತನ್ನ ಧರ್ಮದ ಮೇಲಿನ ಅಂಧ ಪ್ರೀತಿಯಿಂದಾಗಿ ಹತ್ತಾರು ದೇವಾಲಯಗಳನ್ನು ಧ್ವಂಸಗೊಳಿಸಿದನು ಎಂಬುದಾಗಿ ಹೇಳಿಕೊಳ್ಳಲಾಗುತ್ತಿದೆ. ಹಾಗೆಯೇ, ಮುಸ್ಲಿಮ್ ದೊರೆಗಳು ಭಾರೀ ಸಂಖ್ಯೆಯ ಹಿಂದೂ ದೇವಾಲಯಗಳನ್ನು ನಾಶಪಡಿಸಿದರು ಎಂಬುದಾಗಿಯೂ ಹೇಳಲಾಗುತ್ತಿದೆ. ಕಾಶಿ ವಿಶ್ವನಾಥ ದೇವಾಲಯದ ಬಗ್ಗೆ ಹೇಳುವುದಾದರೆ, ಡಾ. ಪಟ್ಟಾಭಿ ಸೀತಾರಾಮಯ್ಯ ತನ್ನ ಪುಸ್ತಕ ‘ಫೆದರ್ಸ್‌ ಆ್ಯಂಡ್ ಸ್ಟೋನ್ಸ್’ನಲ್ಲಿ ಒಂದು ವಿವರಣೆಯನ್ನು ನೀಡಿದ್ದಾರೆ. ಆದರೆ ಅದು ಹೆಚ್ಚಿನ ತಪಾಸಣೆಗೆ ಒಳಪಟ್ಟಿಲ್ಲ. ಈ ಪುಸ್ತಕದ ಪ್ರಕಾರ, ಔರಂಗಜೇಬನ ಪರಿವಾರದ ಸದಸ್ಯೆಯಾಗಿದ್ದ ಕಚ್‌ನ ರಾಣಿಗೆ ಕಾಶಿಯಲ್ಲಿ ಅವಮಾನವಾದಾಗ, ದೇವಸ್ಥಾನವನ್ನು ಧ್ವಂಸಗೊಳಿಸುವಂತೆ ಔರಂಗಜೇಬನು ಆದೇಶ ನೀಡಿದನು. ಈ ವರದಿಯ ಬಗ್ಗೆ ಹೆಚ್ಚಿನವರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಇದು ನಿಜವಾದ ಕಾರಣವೇ ಎನ್ನುವ ಬಗ್ಗೆ ಖಚಿತ ಅಭಿಪ್ರಾಯವಿಲ್ಲ.

ಇನ್ನೊಂದು ವಿವರಣೆಯನ್ನು ಇತಿಹಾಸಕಾರ ಡಾ. ಕೆ.ಎನ್. ಪಣಿಕ್ಕರ್ ಮುಂದಿಟ್ಟಿದ್ದಾರೆ. ಅದರ ಪ್ರಕಾರ, ಬಂಡುಕೋರರು ದೇವಸ್ಥಾನದಲ್ಲಿ ಅಡಗಿಕೊಂಡಿದ್ದರು. ಹಾಗಾಗಿ, ದೇವಸ್ಥಾನವನ್ನು ಧ್ವಂಸಗೊಳಿಸುವಂತೆ ಔರಂಗಜೇಬನು ತನ್ನ ಸೈನಿಕರಿಗೆ ಆದೇಶ ನೀಡಿದನು. ಆದರೆ, ಈ ಮಾಹಿತಿಯ ಮೂಲ ಅಥವಾ ದಾಖಲೆ ಯಾವುದು ಎನ್ನುವುದನ್ನು ಡಾ. ಪಣಿಕ್ಕರ್ ತಿಳಿಸಿಲ್ಲ. ಹಾಗಾಗಿ, ಹೆಚ್ಚಿನವರು ಈ ವಿವರಣೆಯ ಬಗ್ಗೆಯೂ ಸಂದೇಹ ವ್ಯಕ್ತಪಡಿಸಿದ್ದಾರೆ.

ಪುರಾವೆಗಳೊಂದಿಗೆ ನಿಖರವಾಗಿ ಸಿಗುವ ಮಾಹಿತಿಗಳೆಂದರೆ- ಗುವಾಹಟಿಯಲ್ಲಿರುವ ಕಾಮಾಖ್ಯ ದೇವಿ, ಉಜ್ಜೈನಿಯಲ್ಲಿರುವ ಮಹಾಕಾಳಿ ಮತ್ತು ವೃಂದಾವನದಲ್ಲಿರುವ ಕೃಷ್ಣ ದೇವಾಲಯಗಳು ಮುಂತಾದ ಹಲವಾರು ಹಿಂದೂ ದೇವಾಲಯಗಳಿಗೆ ಔರಂಗಜೇಬನು ದೇಣಿಗೆಗಳು, ಚಿನ್ನದ ಆಭರಣಗಳು ಮತ್ತು ಜಹಗೀರು (ಜಮೀನು)ಗಳನ್ನು ನೀಡಿದ್ದನು ಎನ್ನುವುದು. ಗೋಲ್ಕೊಂಡದಲ್ಲಿದ್ದ ಮಸೀದಿಯೊಂದನ್ನೂ ಅವನು ಧ್ವಂಸಗೊಳಿಸಿದ್ದಾನೆ. ಅವನ ಆಸ್ಥಾನದಲ್ಲಿ ಮುಸ್ಲಿಮರು ಮತ್ತು ರಾಜಾ ಜೈಸಿಂಗ್ ಮತ್ತು ಜಸ್ವಂತ್ ಸಿಂಗ್ ಮುಂತಾದ ಹಿಂದೂಗಳೂ ಇದ್ದರು. ಅವನ ರಾಜ್ಯದಲ್ಲಿ ಹಲವು ಹಿಂದೂ ಜಮೀನುದಾರರಿದ್ದರು.

ಮುಸ್ಲಿಮ್ ದೊರೆಗಳು ಹಿಂದೂ ದೇವಾಲಯಗಳನ್ನು ಕೆಡವಿದರು ಎನ್ನುವುದು ಸತ್ಯದ ಒಂದು ಭಾಗ ಮಾತ್ರವಾಗಿದೆ. ಅದು ಆಯ್ದು ತೆಗೆದ ಇತಿಹಾಸವಾಗಿದೆ. ಹಿಂದೂ ರಾಜರು ಸಂಪತ್ತಿಗಾಗಿ ದೇವಸ್ಥಾನಗಳನ್ನು ಕೆಡವಿದರು ಎನ್ನುವುದನ್ನೂ ಇತಿಹಾಸದ ಇನ್ನೊಂದು ಮಗ್ಗಲು ತೋರಿಸುತ್ತದೆ (11ನೇ ಶತಮಾನದಲ್ಲಿ ಕಾಶ್ಮೀರದ ರಾಜ ಹರ್ಷದೇವ್). ಮರಾಠರು ಟಿಪ್ಪು ಸುಲ್ತಾನ್ ಜೊತೆಗೆ ರಾಜಕೀಯ ಶತ್ರುತ್ವ ಹೊಂದಿದ್ದರು. ಹಾಗಾಗಿ, ಮರಾಠಾ ಸೇನೆಗಳು ಮೈಸೂರಿನಲ್ಲಿರುವ ಶ್ರೀರಂಗಪಟ್ಟಣ ದೇವಾಲಯವನ್ನು ಧ್ವಂಸಗೊಳಿಸಿದವು. ಮುಸ್ಲಿಮ್ ದೊರೆಗಳು ಧಾರ್ಮಿಕ ಕಾರಣಗಳಿಗಾಗಿ ದೇವಸ್ಥಾನಗಳನ್ನು ನಾಶಪಡಿಸಿದರು ಎಂಬ ಮನೋಭಾವ ಸರಿಯಿಲ್ಲ.

1992 ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸದ ಭಯಾನಕ ಅಪರಾಧಕ್ಕೆ ದೇಶ ಸಾಕ್ಷಿಯಾಯಿತು. ಈ ಇಡೀ ಅಭಿಯಾನಕ್ಕೆ 1949ರಲ್ಲಿ ಬಾಬರಿ ಮಸೀದಿಯಲ್ಲಿ ರಾಮ ಲಲ್ಲಾ ವಿಗ್ರಹಗಳು ರಹಸ್ಯವಾಗಿ ಕಾಣಿಸಿಕೊಂಡವು ಎಂಬ ಪ್ರಚಾರವೇ ಆಧಾರವಾಗಿತ್ತು. ಈ ವಿಗ್ರಹಗಳ ಸ್ಥಾಪನೆಯೇನೂ ರಹಸ್ಯವಾಗಿರಲಿಲ್ಲ. ಬಲಪಂಥೀಯ ಹಿಂದುತ್ವ ಸಂಘಟನೆಗಳು ಅವುಗಳನ್ನು ಉದ್ದೇಶಪೂರ್ವಕವಾಗಿ ಮಸೀದಿಯಲ್ಲಿ ಸ್ಥಾಪಿಸಿದ್ದವು. ವಿಗ್ರಹಗಳ ಸ್ಥಾಪನೆಯು ಅಪರಾಧ ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿತು. ರಾಮನ ಜನ್ಮ ಸ್ಥಳವಾಗಿರುವ ರಾಮ ಮಂದಿರವನ್ನು ಬಾಬರ್ ಕೆಡವಿ, ಅಲ್ಲಿ ಮಸೀದಿಯೊಂದನ್ನು ನಿರ್ಮಿಸಿದನು ಎಂಬ ವಾದದ ಆಧಾರದಲ್ಲಿ ರಾಮ ಮಂದಿರ ಅಭಿಯಾನವು ನಿಧಾನವಾಗಿ ತೀವ್ರತೆಯನ್ನು ಪಡೆಯಿತು. ಬಾಬರಿ ಮಸೀದಿ ಇದ್ದ ಜಾಗದಲ್ಲಿ ರಾಮ ಮಂದಿರ ಇದ್ದುದಕ್ಕೆ ಯಾವುದೇ ಪುರಾವೆಯಿಲ್ಲ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿತು. ರಾಮ ಅಲ್ಲಿ ಹುಟ್ಟಿದ್ದಕ್ಕೆ ಪುರಾವೆಯಿದೆ ಎನ್ನುವುದನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿತು.

ಆದರೆ, ಇಡೀ ಅಭಿಯಾನವು ಬಿಜೆಪಿ-ಆರೆಸ್ಸೆಸ್‌ಗೆ ಭಾರೀ ಪ್ರಮಾಣದಲ್ಲಿ ರಾಜಕೀಯ ಲಾಭಗಳನ್ನು ನೀಡಿತು. ರಾಮ ಮಂದಿರ ಅಭಿಯಾನದ ಯಶಸ್ಸನ್ನು ಬಳಸಿಕೊಂಡ ಅವುಗಳು ತಮ್ಮ ಚುನಾವಣಾ ಮತ್ತು ಸಾಮಾಜಿಕ ಬಲವನ್ನೂ ಗಣನೀಯವಾಗಿ ಹೆಚ್ಚಿಸಿಕೊಂಡವು.

ರಾಜರ ಮೂಲ ಗುರಿ ಅಧಿಕಾರವೇ ಹೊರತು, ಧರ್ಮವಲ್ಲ. ತಮ್ಮ ರಾಜ್ಯಗಳನ್ನು ವಿಸ್ತರಿಸುವುದು, ಸಂಪತ್ತು ಸಂಗ್ರಹಿಸುವುದು, ಬಡ ರೈತರಿಂದ ತೆರಿಗೆಗಳನ್ನು ವಸೂಲು ಮಾಡುವುದು- ಇವೇ ಮುಂತಾದವು ಅವರ ಗುರಿಗಳು. ಕೋಮುವಾದಿ ಇತಿಹಾಸ ಸೃಷ್ಟಿಯು, ಭಾರತದಲ್ಲಿ ನಮ್ಮ ಇತಿಹಾಸದ ಕಲ್ಪನೆಯನ್ನು ಹಿಂದೂ-ಮುಸ್ಲಿಮ್ ಎಂಬುದಾಗಿ ವಿಂಗಡಿಸಿದೆ.

ಇತಿಹಾಸದ ವ್ಯಾಖ್ಯೆಯು ‘ಹಿಂದ್ ಸ್ವರಾಜ್’ನಲ್ಲಿ ಗಾಂಧೀಜಿ ನೀಡಿರುವ ವಿವರಣೆಗಿಂತ ತೀರಾ ಭಿನ್ನವಾಗಿದೆ. ‘‘ಮುಸ್ಲಿಮ್ ರಾಜರ ಅಡಿಯಲ್ಲಿ ಹಿಂದೂಗಳು ಏಳಿಗೆ ಹೊಂದಿದರು. ಹಾಗೆಯೇ ಹಿಂದೂ ರಾಜರ ಅಡಿಯಲ್ಲಿ ಮುಸ್ಲಿಮರು ಏಳಿಗೆ ಕಂಡರು. ಪರಸ್ಪರ ಹೊಡೆದಾಡುವುದು ಆತ್ಮಹತ್ಯಾಕಾರಕ ಎನ್ನುವುದನ್ನು ಅವರು ಅರಿತಿದ್ದರು. ಶಸ್ತ್ರಾಸ್ತ್ರಗಳಿಗೆ ಹೆದರಿ ಯಾರೂ ತಮ್ಮ ಧರ್ಮವನ್ನು ತ್ಯಜಿಸುವುದಿಲ್ಲ. ಹಾಗಾಗಿ, ಎರಡೂ ಬಣಗಳು ಶಾಂತಿಯಿಂದ ಜೀವಿಸಲು ನಿರ್ಧರಿಸಿದವು. ಇಂಗ್ಲಿಷರ ಆಗಮನದೊಂದಿಗೆ ಸಂಘರ್ಷ ಪುನರಾರಂಭಗೊಂಡಿತು’’ ಎಂಬುದಾಗಿ ಗಾಂಧೀಜಿ ‘ಹಿಂದ್ ಸ್ವರಾಜ್’ನಲ್ಲಿ ಬರೆದಿದ್ದಾರೆ.

ಜವಾಹರಲಾಲ್ ನೆಹರೂ ತನ್ನ ‘ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕದಲ್ಲೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿವಿಧ ಸಮುದಾಯಗಳು ಸಮಗ್ರ ಭಾರತೀಯ ಸಂಸ್ಕೃತಿಯಾಗಿ ಒಂದಾಗುತ್ತವೆ ಹಾಗೂ ಇದು ಗಂಗಾ-ಯಮುನಾ ಸಂಗಮದಂತೆ ಎಂಬುದಾಗಿ ನೆಹರೂ ಬಣ್ಣಿಸಿದ್ದಾರೆ.

 ಕೃಪೆ: countercurrents.org

Writer - ಡಾ. ರಾಮ್ ಪುನಿಯಾನಿ

contributor

Editor - ಡಾ. ರಾಮ್ ಪುನಿಯಾನಿ

contributor

Similar News