ಶೌಚ, ಸ್ನಾನಕ್ಕೂ ಸಾಧ್ಯವಾಗದ ರೀತಿಯಲ್ಲಿ ಜೈಲಿನ ಕೊಠಡಿಯೊಳಗೆ ಸಿಸಿಟಿವಿ ಅಳವಡಿಕೆ: ಜಿ.ಎನ್ ಸಾಯಿಬಾಬಾ ಕುಟುಂಬ ಆರೋಪ
ಹೊಸದಿಲ್ಲಿ: ನಾಗ್ಪುರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ದಿಲ್ಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬಾ ಅವರು ತಮ್ಮ ಸೆಲ್‌ನೊಳಗೆ ಶೌಚಾಲಯ ಮತ್ತು ಸ್ನಾನದ ಸ್ಥಳವನ್ನು ರೆಕಾರ್ಡ್ ಮಾಡುವ ಸಿಸಿಟಿವಿ ಕ್ಯಾಮೆರಾವನ್ನು ಜೈಲು ಅಧಿಕಾರಿಗಳು ಅಳವಡಿಸಿರುವುದನ್ನು ವಿರೋಧಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತೀರ್ಮಾನಿಸಿದ್ದಾಗಿ ಅವರ ಕುಟುಂಬವನ್ನು ಉಲ್ಲೇಖಿಸಿ Indianexpress.com ಶನಿವಾರ ವರದಿ ಮಾಡಿದೆ.
ಸಾಯಿಬಾಬಾ ಅವರು ಮಾರ್ಚ್ 2017 ರಲ್ಲಿ ಮಾವೋವಾದಿ ಸಂಪರ್ಕವನ್ನು ಹೊಂದಿದ್ದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದರು ಮತ್ತು ಅಂದಿನಿಂದ ನಾಗ್ಪುರ ಕೇಂದ್ರ ಕಾರಾಗೃಹದಲ್ಲಿದ್ದರು. ಅವರು 90% ಕ್ಕಿಂತ ಹೆಚ್ಚು ದೈಹಿಕ ಅಸಾಮರ್ಥ್ಯಗಳಿಂದ ಬಳಲುತ್ತಿದ್ದಾರೆ ಮತ್ತು ಗಾಲಿಕುರ್ಚಿಗೆ ಸೀಮಿತವಾಗಿದ್ದಾರೆ ಎಂದು ವರದಿ ತಿಳಿಸಿದೆ.
ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ-ಪಾಟೀಲ್ ಅವರಿಗೆ ಬರೆದ ಪತ್ರದಲ್ಲಿ ಸಾಯಿಬಾಬಾ ಅವರ ಕುಟುಂಬವು "ಸಿಸಿಟಿವಿ ಕ್ಯಾಮೆರಾವನ್ನು ತೆಗೆದುಹಾಕಿ ಅವರ ಆರೋಗ್ಯ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಂತೆ" ಸರ್ಕಾರವನ್ನು ಒತ್ತಾಯಿಸಿದೆ.
"ಮಂಗಳವಾರ 10ನೇ ತಾರೀಕಿನಂದು ಜೈಲು ಅಧಿಕಾರಿಗಳು ಅವರ ಸೆಲ್‌ನ ಮುಂದೆ ವೈಡ್-ಆಂಗಲ್ ಸಿಸಿಟಿವಿ ಕ್ಯಾಮೆರಾವನ್ನು ಫಿಕ್ಸ್ ಮಾಡಿದ್ದು, ಅದು ಸಂಪೂರ್ಣ ಸೆಲ್, ಟಾಯ್ಲೆಟ್, ಸ್ನಾನದ ಸ್ಥಳ ಮತ್ತು ಆ ನಿರ್ದಿಷ್ಟ ಸಣ್ಣ ಸೆಲ್‌ನಲ್ಲಿರುವ ಎಲ್ಲವನ್ನೂ ಸೆರೆಹಿಡಿಯಬಹುದಾಗಿದೆ" ಎಂದು ಸಾಯಿಬಾಬಾರವರ ಪತ್ನಿ ವಸಂತ ಕುಮಾರಿ ಮತ್ತು ಸಹೋದರ ಜಿ ರಾಮದೇವುಡು ಪತ್ರದಲ್ಲಿ ಬರೆದಿದ್ದಾರೆ ಎಂದು ವರದಿ ತಿಳಿಸಿದೆ.
ಈ ಕಾರಣದಿಂದಾಗಿ ಸಾಯಿಬಾಬಾರವರಿಗೆ ಶೌಚಾಲಯವನ್ನು ಬಳಸಲು ಅಥವಾ ಸ್ನಾನ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.
"ಇದು ಸ್ಪಷ್ಟವಾಗಿ ಅವರನ್ನು ಬೆದರಿಸಲು ಮತ್ತು ಅವಮಾನಿಸಲು ನಡೆಸಿರುವ ತಂತ್ರವಾಗಿದೆ" ಎಂದು ಕುಟುಂಬ ಆರೋಪಿಸಿದೆ. “ಇದು ಅವರ ಗೌಪ್ಯತೆಯನ್ನು ಉಲ್ಲಂಘಿಸುವ ಕಾರ್ಯವಾಗಿದ್ದು, ಅವರ ಗೌಪ್ಯತೆ, ಜೀವನ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಅಪಾಯಕ್ಕೊಡ್ಡಲಾಗಿದೆ. ಆದ್ದರಿಂದ ಕ್ಯಾಮೆರಾದ ಮುಂದೆ ಅವರಿಗೆ ಬಟ್ಟೆ ಬದಲಾಯಿಸಲೋ, ಶೌಚ, ಸ್ನಾನ ಸಾಧ್ಯವಾಗುತ್ತಿಲ್ಲ. ಆ ಕ್ಯಾಮರಾವು 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ ಮಾತ್ರವಲ್ಲದೆ ಎಲ್ಲವನ್ನೂ ರೆಕಾರ್ಡ್ ಮಾಡುತ್ತದೆ ಹಾಗೂ ಕಚೇರಿಯಲ್ಲಿ ನಿರಂತರವಾಗಿ ವೀಕ್ಷಿಸಲ್ಪಡುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸೋಮವಾರದಿಂದ ಜೈಲು ಆಡಳಿತ ಕ್ಷಮೆ ಕೇಳುವವರೆಗೆ ಉಪವಾಸ ಸತ್ಯಾಗ್ರಹ ಆರಂಭಿಸಲು ಸಾಯಿಬಾಬಾ ಮುಂದಾಗಿದ್ದಾರೆ ಎಂದು ಪತ್ರದಲ್ಲಿ ಕುಟುಂಬಸ್ಥರು ತಿಳಿಸಿದ್ದಾರೆ.
"ತಾವು [ವಾಲ್ಸೆ-ಪಾಟೀಲ್] ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ವಿನಂತಿಸುತ್ತೇವೆ ಮತ್ತು ಅವರ ಗೌಪ್ಯತೆ, ಘನತೆಯನ್ನು ಕಾಪಾಡುವ ಸಲುವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ತೆಗೆದುಹಾಕಲು ನಾಗಪುರ ಸೆಂಟ್ರಲ್ ಜೈಲಿನಲ್ಲಿರುವ ವ್ಯಕ್ತಿಗಳಿಗೆ ಸೂಚನೆ ನೀಡುತ್ತೇವೆ." ಎಂದಿದ್ದಾರೆ.
ದಿ ಹಿಂದೂ ಪ್ರಕಾರ, ನಾಗಪುರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ನೀಡಲು ನಿರಾಕರಿಸಿದ್ದಾರೆ ಎಂದು ಸಾಯಿಬಾಬಾ ಅವರ ವಕೀಲರು ಆರೋಪಿಸಿದ ಒಂದು ವಾರದ ನಂತರ ಕುಟುಂಬವು ಪತ್ರ ಬರೆದಿದೆ ಎಂದು ದಿ ಹಿಂದೂ ವರದಿ ಮಾಡಿದೆ.