ಜಾತೀಯತೆ ವಿರುದ್ಧ ಹೋರಾಡಿದ 18ನೇ ಶತಮಾನದ ಭಾರತೀಯನನ್ನು ʼಸಂತʼ ಎಂದು ಘೋಷಿಸಿದ ವ್ಯಾಟಿಕನ್‌

Update: 2022-05-15 15:06 GMT
ದೇವಸಹಾಯಂ, Photo: Twitter/rishhikesh

ಚೆನ್ನೈ: 18ನೇ ಶತಮಾನದಲ್ಲಿ ಅಂದಿನ ತಿರುವಾಂಕೂರು ಸಾಮ್ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದೇವಸಹಾಯಂ ಅವರನ್ನು ಇಂದು ವ್ಯಾಟಿಕನ್ ನಲ್ಲಿ ಪೋಪ್ ಫ್ರಾನ್ಸಿಸ್ ಅವರು 'ಸಂತ' ಎಂದು ಘೋಷಿಸಿದರು. ಲಾಝರಸ್‌ ಎಂದೂ ಕರೆಯಲ್ಪಡುವ ದೇವಸಹಾಯಂ, "ಹೆಚ್ಚುತ್ತಿರುವ ಕಷ್ಟಗಳನ್ನು ಸಹಿಸಿಕೊಳ್ಳುವುದು" ಎಂದು ಕರೆಯಲ್ಪಡುವ ಸಂತತ್ವವನ್ನು ಪಡೆದ ಮೊದಲ ಭಾರತೀಯ ಸಾಮಾನ್ಯವ್ಯಕ್ತಿಯಾಗಿದ್ದಾರೆ ದೇವಸಹಾಯಂ ಎಂದು ndtv.com ವರದಿ ಮಾಡಿದೆ.

ಇಂದಿನ ಕನ್ಯಾಕುಮಾರಿಯ ಸಮೀಪ ಹಿಂದೂ ಮೇಲ್ಜಾತಿ ಕುಟುಂಬವೊಂದರಲ್ಲಿ ಜನಿಸಿದ್ದ ನೀಲಕಂಠನ್‌ ಪಿಳ್ಳೈ ಬಳಿಕ ತಿರುವಾಂಕೂರ್‌ ಅರಮನೆಯಲ್ಲಿ ಕೆಲಸ ಮಾಡಿದರು. 1745ರಲ್ಲಿ ಅವರು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡರು ಮತ್ತು ದೇವಸಹಾಯಂ ಹಾಗೂ ಲಾಝರಸ್‌ ಎಂಬ ಹೆಸರು ಪಡೆದರು. ಜಾತಿ ತಾರತಮ್ಯದ ವಿರುದ್ಧ ಹೋರಾಟಕ್ಕಿಳಿದ ಅವರು ಆ ಕಾರಣದಿಂದಲೇ ಕಿರುಕುಳಕ್ಕೀಡಾಗಿ ಕೊಲ್ಲಲ್ಪಟ್ಟರು. 2012ರಲ್ಲಿ ಕಠಿಣ ಪ್ರಕ್ರಿಯೆಯ ಬಳಿಕ ವ್ಯಾಟಿಕನ್‌ ಅವರ ಹುತಾತ್ಮತೆಯನ್ನು ಗುರುತಿಸಿತು.

2013ರಲ್ಲಿ ವೈದ್ಯರು ಮಹಿಳೆಯೊಬ್ಬರ ಭ್ರೂಣವು ಹೊಟ್ಟೆಯಲ್ಲೇ ಸತ್ತುಹೋಗಿದೆ ಎಂದು ಘೋಷಿಸಿದ್ದರು. ಈ ವೇಳೆ ದೇವಸಹಾಯಂರನ್ನು ಪ್ರಾರ್ಥಿಸಿದ ಬಳಿಕ ಭ್ರೂಣ ಚಲಿಸಲಾರಂಭಿಸಿದ್ದು, ಇದೊಂದು ಪವಾಡವೆಂದು ಒಪ್ಪಿಕೊಂಡ ವ್ಯಾಟಿಕನ್ ದೇವಸಹಾಯಂರನ್ನು ಸಂತಪದವಿಗೆ ಆಯ್ಕೆ ಮಾಡಿತು. ಈ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ತೋರಿದ್ದ ಫಾದರ್‌ ಜಾನ್‌ ಕುಳಂದೈ ಅವರು "ಈ ಸಂತತ್ವವು ತಾರತಮ್ಯ ಮುಕ್ತವಾಗಿ ಬದುಕಲು ಮತ್ತು ಜೀವನ ನಡೆಸಲು ನಮಗೆ ಆಹ್ವಾನವಾಗಿದೆ" ಎಂದು ಹೇಳಿದರು.

ವ್ಯಾಟಿಕನ್‌ನ ಮೂಲ ಆಹ್ವಾನ ಪತ್ರವು ದೇವಸಹಾಯಂ ಅವರ ಹಿಂದಿನ ಜಾತಿ "ಪಿಳ್ಳೈ" ಅನ್ನು ಉಲ್ಲೇಖಿಸಿತ್ತು. ಬಳಿಕ, ಜಾತಿಯ ಹೆಸರನ್ನು ಸೇರಿಸುವುದರಿಂದ ದೇವಸಹಾಯಂ ಯಾವ ಉದ್ದೇಶಕ್ಕಾಗಿ ಹೋರಾಟ ಮಾಡಿದ್ದರೋ, ಅದನ್ನು ಈ ಉಲ್ಲೇಖವು ಸೋಲಿಸುತ್ತದೆ ಎಂಬ ಪ್ರತಿಭಟನೆಯ ನಂತರ, ವ್ಯಾಟಿಕನ್ ಅದನ್ನು ತೆಗೆದುಹಾಕಿತು. 

‘‘ ಸಂತ ದೇವಸಹಾಯಂ ಸಮಾನತೆಯನ್ನು ಪ್ರತಿಪಾದಿಸಿದ್ದರು ಹಾಗೂ ಜಾತಿವಾದ ಮತ್ತು ಕೋಮುವಾದದ ವಿರುದ್ಧ ಹೋರಾಡಿದ್ದರು. ಕೋಮುವಾದದ ಉಲ್ಬಣವನ್ನು ಭಾರತ ಎದುರಿಸುತ್ತಿರುವ ಸಂದರ್ಭದಲ್ಲಿಯೇ ಅವರಿಗೆ ಸಂತ ಪದವಿ ದೊರೆತಿದೆ’’ ಎಂದು ನಿವೃತ್ತ ಐಎಎಸ್ ಅಧಿಕಾರಿ ದೇವಸಹಾಯಂ ಅವರು ಸಂತ ದೇವಸಹಾಯಂರ ಜಾತಿ ಸೂಚಕ ಹೆಸರನ್ನು ತೆಗೆದುಹಾಕಬೇಕೆಂದು ಕೋರಿ ವ್ಯಾಟಿಕನ್ಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

 ತಾಂಡವವಾಡುತ್ತಿರುವ ಕೋಮುವಾದದ ವಿಷದ ವಿರುದ್ಧ ಸಿಡಿದೇಳಲು ಚರ್ಚ್ಗೆ ದೊರೆತ ಮಹಾನ್ ಅವಕಾಶ ಇದಾಗಿದೆ. ಚರ್ಚ್ ಇದನ್ನೊಂದು ಜನತೆಯ ಚಳವಳಿಯಾಗಿ ಮಾಡಬೇಕಾಗಿದೆ. ಆದರೆ ಅದು ವಿಫಲವಾಗಿದ್ದು ಈ ಕಾರ್ಯಕ್ರಮವನ್ನು ಧರ್ಮಗುರುಗಳಿಂದ ಕೇಂದ್ರೀಕೃತವಾದ ಕಾರ್ಯಕ್ರಮವನ್ನಾಗಿ ಮಾಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News