×
Ad

ಪ್ರಾಮಾಣಿಕತೆ ಇಲ್ಲದ ಮಾಧ್ಯಮಗಳು ವ್ಯಾಪಾರಿಗಳಾಗಬಹುದು: ಪ್ರತಾಪ್‌ ಚಂದ್ರ ಶೆಟ್ಟಿ

Update: 2022-05-15 20:18 IST

ಉಡುಪಿ : ಪ್ರಾಮಾಣಿಕ ರಾಜಕಾರಣಿ ಎಂಬುದೇ ಇಲ್ಲ. ಎಲ್ಲ ರಾಜಕಾರಣಿಗಳು ಪ್ರಾಮಾಣಿಕರಾಗಿಯೇ ಇರಬೇಕು. ಅದೇ ರೀತಿ ಮಾಧ್ಯಮ ಗಳು ಕೂಡ ಪ್ರಾಮಾಣಿಕವಾಗಿರಬೇಕು. ಒಂದು ವೇಳೆ ಪ್ರಾಮಾಣಿಕರಾಗಿ ಇಲ್ಲದಿದ್ದರೆ ಮಾಧ್ಯಮ ಮತ್ತು ರಾಜಕಾರಣಿಗಳು ವ್ಯಾಪಾರಿಗಳಾಗಬಹುದು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್‌ ಚಂದ್ರ ಶೆಟ್ಟಿ ಹೇಳಿದ್ದಾರೆ.

ಕನ್ನಡ ಮೀಡಿಯಾ ಡಾಟ್ ಕಾಂ ಸುದ್ದಿ ಜಾಲತಾಣ ಇದರ ವರ್ಷಾಚರಣೆ ಅಂಗವಾಗಿ ಕುಂದಾಪುರ ಕಲಾಮಂದಿರದಲ್ಲಿ ರವಿವಾರ ನಡೆದ ಮುಂಗಾರು ಪತ್ರಿಕೆಯ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟಿ ಇವರ ಸಂಪದಾಕೀಯ ಮತ್ತಿತ್ತರ ಬರಹಗಳ ಸಂಕಲನ ‘ಬೇರೆಯೇ ಮಾತು’ ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೇವಲ ಹಣ ತೆಗೆದುಕೊಳ್ಳದೆ ಇರುವುದು ಮಾತ್ರ ಪ್ರಾಮಾಣಿಕರ ಲಕ್ಷಣ ಅಲ್ಲ. ತನಗೆ ಕೊಟ್ಟ ಹುದ್ದೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದವರೇ ನಿಜವಾದ ಪ್ರಾಮಾಣಿಕರಾಗಿರುತ್ತಾರೆ. ಕಣ್ಣು ಮುಚ್ಚಿ ಕಡತಕ್ಕೆ ಸಹಿ ಹಾಕಿದರೆ ಪ್ರಾಮಾಣಿಕವಾಗಿರಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಇಂದಿನ ಮಾಧ್ಯಮಗಳು ಗೌರವ ಕಳೆದುಕೊಳ್ಳುತ್ತಿವೆ. ಆದುದರಿಂದ ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ವಿಚಾರಧಾರೆಗಳನ್ನು ಈ ಕಾಲದಲ್ಲಿ ಅನುಷ್ಠಾನ ಮಾಡುವ ಕುರಿತು ಚಿಂತನೆ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಸಾಮಾಜಿಕ ಹೋರಾಟಗಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿದರು. ಬೇರೆಯೇ ಮಾತು ಪುಸ್ತಕದ ಸಂಪಾದಕ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಪುಸ್ತಕ ಪರಿಚಯ ಮಾಡಿದರು. ವಡ್ಡರ್ಸೆ ನವೀನ್ ಶೆಟ್ಟಿ, ಪುಸ್ತಕದ ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಉಪಸ್ಥಿತರಿದ್ದರು.  

ಕನ್ನಡ ಮೀಡಿಯಾ ಪ್ರಧಾನ ಸಂಪಾದಕ ಕೆ.ಚಂದ್ರಶೇಖರ್ ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕೋಟೇಶ್ವರ ಸರಕಾರಿ ಕಾಲೇಜಿನ ಉಪನ್ಯಾಸಕ ರಂಜಿತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಶ್ರೀರಾಜ್ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು.

‘ಉಪಸಭಾಪತಿ ಆತ್ಮಹತ್ಯೆಗೆ ನಾನು ಹೊಣೆಯಲ್ಲ’

ಕಾರ್ಯಕ್ರಮದಲ್ಲಿ ಉಲ್ಲೇಖವಾದ ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿ ಸಿದ ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ, ಸಭಾಪತಿ ಇರುವಾಗ ಸಭಾಪತಿಯ ಕುರ್ಚಿಯಲ್ಲಿ  ಉಪಸಭಾಪತಿ ಕುಳಿತುಕೊಳ್ಳುವುದು ಸರಿಯೇ ತಪ್ಪೇ? ಈ ತಪ್ಪನ್ನು ಮಾಡಿದ ವರು ಯಾರು? ಅದಕ್ಕೆ ಅವರೇ ಹೊಣೆ ಹೊರತು ನಾನಲ್ಲ. ಇದನ್ನು ಯಾರು ಕೂಡ ವಿಶ್ಲೇಷಣೆ ಮಾಡುವುದಿಲ್ಲ. ಮಾಧ್ಯಮದವರು ಬಿಡಿ, ಕಾಂಗ್ರೆಸ್‌ನವರು ಕೂಡ ವಿಶ್ಲೇಷಣೆ ಮಾಡಿಲ್ಲ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News