ಕನಕದಾಸರ ಹೆಸರಿನಲ್ಲಿ 50 ವಸತಿ ನಿಲಯಗಳ ನಿರ್ಮಾಣ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2022-05-15 14:52 GMT

ಕುಂದಾಪುರ : ರಾಜ್ಯದಲ್ಲಿ ಕನಕದಾಸರ ಹೆಸರಿನಲ್ಲಿ 50 ವಸತಿ ನಿಲಯಗಳ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಹಣ ಘೋಷಿಸಿದ್ದು ಇದರಿಂದ ಕುಂದಾಪುರ ಹಾಗೂ ಬೈಂದೂರು ಕ್ಷೇತ್ರಗಳಿಗೂ ಅನುಕೂಲವಾಗ ಲಿದೆ. ಈ ಸಂಬಂಧ ಶೀಘ್ರ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕೋಟೇಶ್ವರದ ವಕ್ವಾಡಿ ರಸ್ತೆಯ ಬಳಿ ನಿರ್ಮಾಣ ಗೊಂಡ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಬಹಳಷ್ಟು ಬೇಡಿಕೆ ಇದ್ದು, ಸುಮಾರು ೩ ಕೋಟಿ ೭೦ ಲಕ್ಷ ರೂ. ವೆಚ್ಚದಲ್ಲಿ ಈ ಹಾಸ್ಟೆಲ್ ನಿರ್ಮಾಣವಾಗಿದೆ. ೧೪೦ ವಿದ್ಯಾರ್ಥಿನಿಯರು ಇಲ್ಲಿ ವಸತಿ ಪಡೆಯಲಿದ್ದಾರೆ. ಸ್ವಂತ ಕಟ್ಟಡವಾಗುವ ಮೂಲಕ ಸರಕಾರ ಬಾಡಿಗೆ ನೀಡುವ ಸಾವಿರಾರು ರೂಪಾಯಿ ಹಣ ಉಳಿತಾಯವಾಗಲಿದೆ ಎಂದರು.

ರಾಜ್ಯ ಮತ್ತು ದೇಶದ ವಿವಿಧೆಡೆಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಬೆಳಗಾವಿ, ಮೈಸೂರು, ದಾರವಾಡ, ದಾವಣಗೆರೆಗೆ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಶಿಕ್ಷಣ ಕೇಂದ್ರಗಳು ಹೆಚ್ಚಿರುವ ಪ್ರದೇಶದಲ್ಲಿ ದೀನ್ ದಯಾಳ್ ಜೀ ಉಪಾಧ್ಯಾಯರ ಹೆಸರಿನಲ್ಲಿ ೧ ಸಾವಿರ ವಿದ್ಯಾರ್ಥಿಗಳು ಉಳಿಯುವ ಹಾಸ್ಟೆಲ್ ಪ್ರಾರಂಭಿಸಲಾಗುತ್ತದೆ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ-ಪಂಗಡ, ಅಲ್ಪಸಂಖ್ಯಾತರು ಹಾಗೂ ಯಾವುದೇ ಮೀಸಲಾತಿ ಇಲ್ಲದ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳು ತಂಗುವ ಹಾಸ್ಟೆಲ್ ಇದಾಗ ಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕುಂಭಾಶಿ ಗ್ರಾಪಂ ಅಧ್ಯಕ್ಷೆ ಶ್ವೇತಾ ಎಸ್.ಆರ್, ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಎಚ್., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಜಿಲ್ಲಾ ಅಧಿಕಾರಿ ದೇವೀಂದ್ರ ಎಸ್. ಬಿರಾದಾರ, ಜಿಪಂ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ತಾ.ಪಂ  ಮಾಜಿ ಸದಸ್ಯ ಕರಣ್ ಪೂಜಾರಿ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಗಣೇಶ್, ಗೋಪಾಡಿ ಗ್ರಾಪಂ ಸದಸ್ಯ ಸುರೇಶ್ ಶೆಟ್ಟಿ ಬೀಜಾಡಿ ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ನರಸಿಂಹ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

‘ಡೆಂಗ್ ಬಗ್ಗೆ ಗಂಭೀರ ಕ್ರಮ’‌

ಮುದೂರು ಭಾಗದಲ್ಲಿನ ಡೆಂಗಿ ಜ್ವರದ ಬಗ್ಗೆ ಸರಕಾರ ಗಂಭೀರವಾಗಿ ಕ್ರಮ ತೆಗೆದುಕೊಂಡಿದೆ. ಜಿಲ್ಲೆಯ ಮೂರು ಶಾಸಕರು ಡಿಸಿ ಜೊತೆಗೆ ಮಾತನಾಡಿದ್ದಾರೆ. ನಾನು ಕೂಡ ಆರೋಗ್ಯ ಮಂತ್ರಿಗಳು ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಜೊತೆ ನಿರಂತರವಾಗಿ ಮಾತನಾಡಿದ್ದು ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದೇನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಮಸ್ಯೆ ಪರಿಹಾರದ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಡೇಂಗಿ ಬಾಧಿತರು ಹೆಚ್ಚಾಗಿ ದಾಖಲಾದ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಒಂದೆರಡು ದಿನದಲ್ಲಿ ಮುದೂರಿಗೆ ಭೇಟಿ ನೀಡಲಿದ್ದೇನೆ ಎಂದ ಅವರು ಡೆಂಗಿ ಗಂಭೀರ ಸ್ವರೂಪಕ್ಕೊಳಪಟ್ಟು ಸರಕಾರಿ ಆಸ್ಪತ್ರೆಗಿಂತ ಖಾಸಗಿ ಆಸ್ಪತ್ರೆ ಚಿಕಿತ್ಸೆ ಅನಿವಾರ್ಯ ಎಂದಾದರೆ ಅವರ ಚಿಕಿತ್ಸಾ ವೆಚ್ಚ ಸರಕಾರ ಭರಿಸಬಹುದೇ ಎಂಬುದರ ಬಗ್ಗೆ ವಿಮರ್ಷಿಸಲಾ ಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News