ಮಾಯಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ನೇಪಾಳ ಪ್ರವಾಸ ಆರಂಭಿಸಿದ ಪ್ರಧಾನಿ ಮೋದಿ

Update: 2022-05-16 06:51 GMT

ಲುಂಬಿನಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ನೇಪಾಳದ ಪವಿತ್ರ ಮಾಯಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಗೌತಮ ಬುದ್ಧನ ಜನ್ಮಸ್ಥಳವಾದ ಐತಿಹಾಸಿಕ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ  ನೇಪಾಳದ ಪ್ರಧಾನಿ  ಶೇರ್ ಬಹದ್ದೂರ್ ದೇವುಬಾ ಅವರೊಂದಿಗೆ ಇದ್ದರು.

"ಲುಂಬಿನಿಯ ಪವಿತ್ರ ಮಾಯಾ ದೇವಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ನೇಪಾಳ ಭೇಟಿಯನ್ನು ಆರಂಭಿಸುತ್ತಿದ್ದೇನೆ" ಎಂದು ಭಾರತದ ಪ್ರಧಾನ ಮಂತ್ರಿಗಳ ಕಚೇರಿ ಟ್ವೀಟ್ ಮಾಡಿದೆ.

"ಬುದ್ಧ ಪೂರ್ಣಿಮೆಯ ಶುಭ ಸಂದರ್ಭದಲ್ಲಿ, ಇಬ್ಬರೂ ಪ್ರಧಾನ ಮಂತ್ರಿಗಳು ಗೌತಮ ಬುದ್ಧನ ಜನ್ಮಸ್ಥಳವಾದ ಲುಂಬಿನಿಯಲ್ಲಿರುವ ಪವಿತ್ರ ಮಾಯಾದೇವಿ ದೇವಸ್ಥಾನದಲ್ಲಿ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು" ಎಂದು ನೇಪಾಳದ ವಿದೇಶಾಂಗ ಸಚಿವಾಲಯ ಟ್ವಿಟರ್‌ನಲ್ಲಿ ತಿಳಿಸಿದೆ.

ದೇವುಬಾ ಅವರ ಆಹ್ವಾನದ ಮೇರೆಗೆ ನೇಪಾಲದಲ್ಲಿರುವ  ಪ್ರಧಾನಿ ಮೋದಿ, ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಲುಂಬಿನಿಗೆ ಒಂದು ದಿನದ ಭೇಟಿ ನೀಡುತ್ತಿದ್ದಾರೆ.

2014  ರಿಂದ   ನೇಪಾಳಕ್ಕೆ ಪ್ರಧಾನಿಯವರ ಐದನೇ ಭೇಟಿ ಇದಾಗಿದೆ. ಉತ್ತರ ಪ್ರದೇಶದ ಕುಶಿನಗರದಿಂದ ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಪ್ರಧಾನಿ ಮೋದಿ ಇಲ್ಲಿಗೆ ಆಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News