ಜ್ಞಾನವಾಪಿ ಮಸೀದಿ ಪ್ರಕರಣ: 'ಶಿವಲಿಂಗ' ಪತ್ತೆಯಾದ ಕೊಳ ವಶಪಡಿಸಿಕೊಳ್ಳುವಂತೆ ವಾರಣಾಸಿ ಕೋರ್ಟ್ ಆದೇಶ

Update: 2022-05-16 18:26 GMT
photo:PTI

ವಾರಣಾಸಿ, ಮೇ 17: ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ಶಿವಲಿಂಗ ಕಂಡು ಬಂದಿದೆ ಎನ್ನಲಾದ ಪ್ರದೇಶವನ್ನು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸುವಂತೆ ವಾರಣಾಸಿ ಸಿವಿಲ್ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ದೂರುದಾರರು ನ್ಯಾಯಾಲಯದಲ್ಲಿ ಪ್ರತಿಪಾದಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ. ಮಸೀದಿಯ ಹಿಂದಿರುವ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಮಸೀದಿ ಸಂಕೀರ್ಣದ ಚಿತ್ರೀಕರಣದ ಕೊನೆಯ ದಿನ ‘ಶಿವಲಿಂಗ’ ಅಥವಾ ಭಗವಾನ್ ಶಿವನ ಅವಶೇಷ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆ ಕೊಳದಿಂದ ನೀರು ಬರಿದು ಮಾಡಲಾಯಿತು. ಈ ಸಂದರ್ಭ ‘ಶಿವಲಿಂಗ’ ಪತ್ತೆಯಾಯಿತು ಎಂದು ದೇಗುಲದಲ್ಲಿ ವರ್ಷ ಪೂರ್ತಿ ಪೂಜೆಗೆ ಅವಕಾಶ ನೀಡುವಂತೆ ಕೋರಿದ ಹಿಂದೂ ಮಹಿಳೆಯರ ಗುಂಪನ್ನು ಪ್ರತಿನಿಧಿಸಿದ ನ್ಯಾಯವಾದಿ ಸುಭಾಷ್ ನಂದನ್ ಚತುರ್ವೇದಿ ಪ್ರತಿಪಾದಿಸಿದ್ದಾರೆ.

ಶಿವಲಿಂಗ ಪತ್ತೆಯಾಗಿದೆ ಎನ್ನಲಾದ ಇಸ್ಲಾಮ್ ನ ‘ವುಝು’ ಅಥವಾ ಶುದ್ಧೀಕರಣ ಆಚರಣೆಗಳಿಗೆ ಬಳಸುವ ಕೊಳಕ್ಕೆ ನಿರ್ಬಂಧ ವಿಧಿಸುವಂತೆ ದೂರುದಾರರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಮನವಿಯನ್ನು ನ್ಯಾಯಾಲಯ ಸ್ವೀಕರಿಸಿತು ಹಾಗೂ ಸದ್ಯ ಕೊಳವನ್ನು ಬಳಸುತ್ತಿಲ್ಲ ಎಂದು ಖಾತರಿಪಡಿಸುವಂತೆ ವಾರಣಾಸಿ ಜಿಲ್ಲಾ ದಂಡಾಧಿಕಾರಿಗೆ ಆದೇಶಿಸಿತು. ನಿರ್ಬಂಧಿತ ಪ್ರದೇಶಕ್ಕೆ ಯಾರೊಬ್ಬರು ಪ್ರವೇಶಿಸುತ್ತಿಲ್ಲವೆಂದು ಜಿಲ್ಲಾ ದಂಡಾಧಿಕಾರಿ, ಪೊಲೀಸ್ ವರಿಷ್ಠ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ಯ ಅಧಿಕಾರಿ ಖಾತರಿ ನೀಡಲಿದ್ದಾರೆ ನ್ಯಾಯಾಲಯ ತಿಳಿಸಿತು. ಮಾಧ್ಯಮದೊಂದಿಗೆ ಮಾತನಾಡುವ ಸಂದರ್ಭ ವಾರಣಾಸಿಯ ಜಿಲ್ಲಾ ದಂಡಾಧಿಕಾರಿ ಕೌಶಲ್ ರಾಜ್ ಶರ್ಮಾ ಅವರು ಮಸೀದಿ ಸಂಕೀರ್ಣದ ಆವರಣದಲ್ಲಿ ‘ಶಿವಲಿಂಗ’ ಪತ್ತೆಯಾಗಿರುವ ವರದಿಯನ್ನು ದೃಢಪಡಿಸಿಲ್ಲ. ‘‘ಜ್ಞಾನವ್ಯಾಪಿ ಮಸೀದಿಯ ಸಮೀಕ್ಷೆಯ ವಿವರವನ್ನು ಆಯೋಗದ ಯಾವೊಬ್ಬ ಸದಸ್ಯ ಕೂಡ ಬಹಿರಂಗಪಡಿಸಿಲ್ಲ. ನ್ಯಾಯಾಲಯ ಈ ಸಮೀಕ್ಷೆಯ ಕುರಿತ ಮಾಹಿತಿಯ ಸಂರಕ್ಷಕ’’ ಎಂದು ಶರ್ಮಾ ಅವರು ಹೇಳಿದ್ದಾರೆ. 

ದಾರಿ ತಪ್ಪಿಸುವ ಹೇಳಿಕೆ
ವಾರಣಾಸಿ: ‘ಶಿವಲಿಂಗ’ದ ಬಗ್ಗೆ ಅರ್ಜಿದಾರರು ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ ಎಂದು ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮಾನ್ ಇಂತೆಝಮಿಯಾ ಮಸೀದಿ ಸಮಿತಿಯ ನ್ಯಾಯವಾದಿ ಪ್ರತಿಪಾದಿಸಿದ್ದಾರೆ. ‘‘ಜ್ಞಾನವಾಪಿ ಮಸೀದಿಯ ವಜೂಖಾನದಲ್ಲಿ ಕಾರಂಜಿ ಮಾತ್ರ ಇದೆ. ಶಿವಲಿಂಗ ಇದೆ ಎಂದು ಪ್ರತಿಪಾದಿಸುತ್ತಿರುವುದು ದಾರಿ ತಪ್ಪಿಸುವ ಹೇಳಿಕೆ. ದೂರುದಾರರು ಶಿವಲಿಂಗ ಎಂದು ಪ್ರತಿಪಾದಿಸುತ್ತಿರುವುದು ಕಾರಂಜಿಯನ್ನು’’ ಎಂದು ಅವರು ಹೇಳಿದ್ದಾರೆ. 

ಇಂದು ಸುಪ್ರೀಂನಿಂದ ಮನವಿ ವಿಚಾರಣೆ 
ವಾರಣಾಸಿ: ಹಿಂದೂ ಹಾಗೂ ಮುಸ್ಲಿಮರು ಆರಾಧಿಸುವ ಹಕ್ಕುಗಳನ್ನು ಪ್ರತಿಪಾದಿಸುತ್ತಿರುವ ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ನ್ಯಾಯಾಲಯ ನಿಯೋಜಿಸಿದ ಆಯುಕ್ತರಿಂದ ಪರಿಶೀಲನೆ ಹಾಗೂ ಸರ್ವೇಕ್ಷಣೆ, ವೀಡಿಯೊಗ್ರಫಿ ನಡೆಸಲು ಅವಕಾಶ ನೀಡುವ ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಮಂಗಳವಾರ ವಿಚಾರಣೆ ನಡೆಸಲಿದೆ. ನ್ಯಾಯಾಲಯದ ಆದೇಶದಂತೆ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ನಡೆಸಲಾದ ವೀಡಿಯೊಗ್ರಫಿ ಸರ್ವೇಕ್ಷಣೆ ಬಿಗಿ ಭದ್ರತೆಯ ನಡುವೆ ಮೂರನೇ ದಿನವಾದ ಸೋಮವಾರ ಪೂರ್ಣಗೊಂಡಿದೆ. ಮಸೀದಿ ಸಂಕೀರ್ಣದ ಸರ್ವೇಕ್ಷಣೆ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿತ್ತು ಹಾಗೂ ಬೆಳಗ್ಗೆ ಸುಮಾರು 10.15ಕ್ಕೆ ಅಂತ್ಯಗೊಂಡಿತ್ತು. ಅಂಜುಮನ್ ಇಂತೆಝಮಿಯಾ ಮಸೀದಿ ಸಮಿತಿ ಈ ಮನವಿ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News