ಕೋಮು ಘರ್ಷಣೆ ಕುರಿತು ಪ್ರಧಾನಿ ಮೌನ ಪ್ರಶ್ನಿಸಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

Update: 2022-05-16 08:22 GMT
Photo: PTI

ಜೈಪುರ: ಕಳೆದ ವಾರಗಳಿಂದ ದೇಶವನ್ನು ಕಾಡುತ್ತಿರುವ ಕೋಮು ಘರ್ಷಣೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜಾಣ  ಮೌನವನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಪ್ರಶ್ನಿಸಿದ್ದಾರೆ.

''ಪ್ರಧಾನಿ ಮೋದಿ ಅವರು ಗಲಭೆಗಳನ್ನು ಏಕೆ ಖಂಡಿಸಿಲ್ಲ? ಗೃಹ ಸಚಿವರೂ ಧೈರ್ಯ ತೋರಿ ಸಮಗ್ರ ತನಿಖೆಗೆ ಆದೇಶಿಸಬೇಕು. ಅಶಾಂತಿಯನ್ನು ಪ್ರಚೋದಿಸುವ ಪಿತೂರಿಯ ಹಿಂದೆ ಯಾರಿದ್ದಾರೆ ಮತ್ತು ಯಾವ ರಾಜಕೀಯ ಪಕ್ಷವು ಅದರಿಂದ ಲಾಭ ಪಡೆಯುತ್ತಿದೆ ಎಂಬ ಸತ್ಯ ಹೊರಬರುವ ಏಕೈಕ ಮಾರ್ಗ ಇದಾಗಿದೆ”ಎಂದು ಕಾಂಗ್ರೆಸ್ ನಾಯಕ ಹೇಳಿದರು.

ರಾಜಸ್ಥಾನದ ಸಚಿವ ಮಹೇಶ್ ಜೋಶಿ ಅವರ ಪುತ್ರನ ಮೇಲಿನ ಅತ್ಯಾಚಾರದ ಆರೋಪದ ಬಗ್ಗೆ ಕೇಳಿದಾಗ, ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳುವುದರ ವಿರುದ್ಧ ನನಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಕೆಲವು ಜನರು ಹಿಂಸಾಚಾರ ಹಾಗೂ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿದ್ದಾರೆ ಎಂದು ಗೆಹ್ಲೋಟ್ ಹೇಳಿದರು.

''ದೇಶದಲ್ಲಿ ವಾತಾವರಣ ಸಂಪೂರ್ಣ ಹದಗೆಟ್ಟಿದೆ. ಏಳು ರಾಜ್ಯಗಳಲ್ಲಿ ಗಲಭೆಗಳು ನಡೆದಿವೆ.  ರಾಮನವಮಿ ಆಚರಣೆಯ ಸಂದರ್ಭದಲ್ಲಿ ಘರ್ಷಣೆಗಳು ಭುಗಿಲೆದ್ದವು ಮತ್ತು ಅದಕ್ಕೂ ಮೊದಲು ಕರೌಲಿಯಲ್ಲಿ ಉದ್ವಿಗ್ನತೆ ಇತ್ತು. ಈ ಎಲ್ಲಾ ಘಟನೆಗಳಲ್ಲಿ ಸಾಮಾನ್ಯವಾದ ಒಂದು ವಿಷಯವಿದೆ.  ಅದೇ ವಿಧಾನವನ್ನು ಅನುಸರಿಸಲಾಗುತ್ತಿದೆ . ಗಲಭೆಗಳ ತನಿಖೆಗೆ ಆದೇಶಿಸುವಂತೆ ಗೃಹ ಸಚಿವ ಅಮಿತ್ ಶಾಗೆ ಒತ್ತಾಯಿಸುತ್ತೇನೆ’’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News