ರಾಯಗಢ: ಗೋಕಳ್ಳತನ ಆರೋಪ ಹೊರಿಸಿ ವ್ಯಕ್ತಿಯನ್ನು ಥಳಿಸಿ ಗುಂಪುಹತ್ಯೆಗೈದ ದುಷ್ಕರ್ಮಿಗಳು

Update: 2022-05-16 11:25 GMT
ಸಾಂದರ್ಭಿಕ ಚಿತ್ರ

ರಾಯಗಢ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಜಾನುವಾರು ಕಳ್ಳತನದ ಶಂಕೆಯ ಮೇಲೆ 20 ಕ್ಕೂ ಹೆಚ್ಚು ಜನರ ಗುಂಪೊಂದು ಈ ತಿಂಗಳ ಆರಂಭದಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆಗೈದಿತ್ತು ಎಂದು Theindianexpress.com ಸೋಮವಾರ ವರದಿ ಮಾಡಿದೆ. ರಾಯಗಡದ ಮಾಸೆವಾಡಿ ಗ್ರಾಮದಲ್ಲಿ ಮೇ 6ರ ರಾತ್ರಿ ಈ ಹಲ್ಲೆ ನಡೆದಿದ್ದು, ರವಿವಾರ ಈ ವಿಷಯ ಬೆಳಕಿಗೆ ಬಂದಿದೆ.

ಈವರೆಗೆ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಲಾಗಿದ್ದು, ಒಟ್ಟು 13 ಮಂದಿಯ ವಿರುದ್ಧ ಗಲಭೆ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಮೃತ ವ್ಯಕ್ತಿ ಸೇರಿದಂತೆ ಮೂವರು ವ್ಯಕ್ತಿಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಸ್ಥಳೀಯರು ತಡೆದು ನಿಲ್ಲಿಸಿದ್ದು, ವಾಹನದಲ್ಲಿ ಕೆಲವು ಜಾನುವಾರುಗಳು ಕಂಡುಬಂದಿವೆ" ಎಂದು ಅಜ್ಞಾತ ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ದಾಳಿಯಲ್ಲಿ ಇಬ್ಬರು ಪರಾರಿಯಾಗಿದ್ದು, ಒಬ್ಬ ಗಂಭೀರ ಗಾಯಗೊಂಡಿದ್ದ. ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾದರೂ ಅಲ್ಲಿ ಅವರು ಮೃತಪಟ್ಟರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಮೃತರನ್ನು 35 ವರ್ಷದ ಇಂತಿಝಾರ್ ಅಲಿ ಶೇಖ್ ಎಂದು ಗುರುತಿಸಲಾಗಿದೆ. ಸ್ಥಳೀಯರ ದೂರಿನ ಆಧಾರದ ಮೇಲೆ ಶೇಖ್ ಅವರ ಇಬ್ಬರು ಸಹಚರರ ಮೇಲೆ ಗೋವು ಕದ್ದ ಆರೋಪ ಹೊರಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಂದ್ರ ಪಾಟೀಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News